ಸಿದ್ದಗಂಗಾ ಮಠದ ಉತ್ತರಾಧಿಕಾರಿಗೆ ಪಟ್ಟಾಧಿಕಾರ

ತುಮಕೂರು, ಏ. ೨೩- ಬಸವ ಜಯಂತಿಯ ಶುಭ ದಿನವಾದ ಇಂದು ಇತಿಹಾಸ ಪ್ರಸಿದ್ದ ಸಿದ್ದಗಂಗಾ ಮಠ ಸೇರಿದಂತೆ ಕಂಚಗಲ್ ಬಂಡೆ ಮಠ, ವಿಜಯಪುರದ ಬಸವ ಕಲ್ಯಾಣ ಮಠಕ್ಕೆ ನೇಮಕ ಮಾಡಲಾಗಿರುವ ನೂತನ ಉತ್ತರಾಧಿಕಾರಿ ಪಟ್ಟಾಧಿಕಾರ ಮಹೋತ್ಸವ ಶ್ರೀಮಠದಲ್ಲಿಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಸಿದ್ದಗಂಗೆಯ ಹಳೇ ಮಠದಲ್ಲಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ಮುಂಜಾನೆಯಿಂದಲೇ ಜಂಗಮ ಪಟ್ಟಾಧಿಕಾರದ ವಿಧಿ ವಿಧಾನಗಳು ನೆರವೇರಿದವು.
ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಎಂದಿನಂತೆ ಇಷ್ಟಲಿಂಗ ಪೂಜೆ ನೆರವೇರಿಸಿದ ಬಳಿಕ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಇಚ್ಛೆಯಂತೆ ಉತ್ತರಾಧಿಕಾರಿ ಪಟ್ಟಾಭಿಷೇಕವನ್ನು ನಡೆಸಿದರು.
ಸಿದ್ದಗಂಗಾ ಮಠ, ಕಂಚಕಲ್ ಬಂಡೆ ಮಠ ಹಾಗೂ ವಿಜಯಪುರದ ಬಸವಕಲ್ಯಾಣ ಮಠದ ಉತ್ತರಾಧಿಕಾರಿಗಳಿಗೆ ವಿರಕ್ತ ಪರಂಪರೆಯಂತೆ ಪಟ್ಟಾಭಿಷೇಕ ಮಾಡಲಾಯಿತು.
ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗುದ್ದೆಗೆ ನೂತನ ಉತ್ತರಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಂತರ ಜಂಗಮ ಪಟ್ಟಾಧಿಕಾರದ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.
ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರುಗಳು ಭಾಗಿಯಾಗಿದ್ದರು.
ನೂತನ ಉತ್ತರಾಧಿಕಾರಿಗಳಿಗೆ ಅಭಿದಾನ ಘೋಷಣೆ
ಸಿದ್ದಗಂಗಾ ಮಠದ ಉತ್ತರಾಧಿಕಾರಿಗಳಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಮೈಲಹಳ್ಳಿ ಮನೋಜ್‌ಕುಮಾರ್ ಅವರಿಗೆ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ, ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕಂಚುಗಲ್ ಬಂಡೇಮಠದ ಉತ್ತರಾಧಿಕಾರಿಯಾಗಿರುವ ಹರ್ಷಾ ಅವರಿಗೆ ಶ್ರೀ ಮಹಾಲಿಂಗ ಸ್ವಾಮೀಜಿ, ವಿಜಯಪುರ ಬಸವಕಲ್ಯಾಣ ಮಠದ ಉತ್ತರಾಧಿಕಾರಿಯಾಗಿರುವ ಗೌರಿಕುಮಾರ್ ಅವರಿಗೆ ಶ್ರೀ ಸದಾಶಿವ ಸ್ವಾಮೀಜಿ ಎಂದು ನೂತನ ಅಭಿದಾನ ಘೋಷಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ನೂತನ ಸ್ವಾಮೀಜಿಗಳಿಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಠದ ಪರಂಪರೆ, ವಿರಕ್ತಾಶ್ರಮದ ಪರಂಪರೆಯನ್ನು ಸುದೀರ್ಘವಾಗಿ ತಿಳಿಸಿದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನೂತನ ಉತ್ತರಾಧಿಕಾರಿಗಳ ಪಟ್ಟಾಧಿಕಾರ ಮಹೋತ್ಸವ ಸರಳವಾಗಿ ನಡೆಯಿತು.
ಈ ಪಟ್ಟಾಧಿಕಾರ ಸಮಾರಂಭದಲ್ಲಿ ವಿವಿಧ ಮಠಾಧೀಶರುಗಳು, ಭಕ್ತಾದಿಗಳು ಭಾಗವಹಿಸಿದ್ದರು.