ಸಿದ್ದಗಂಗಾ ಮಠದಲ್ಲಿ ಬೋನಿಗೆ ಬಿದ್ದ ಕರಡಿ

ತುಮಕೂರು, ಮಾ. ೨೮- ನಗರದ ಸಿದ್ದಗಂಗಾ ಮಠದ ಬಳಿ ಹಲವು ದಿನಗಳಿಂದ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಾ ಜನರಲ್ಲಿ ಭೀತಿ ಹುಟ್ಟಿಸಿದ್ದ ಕರಡಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ರಾತ್ರಿ ಬಿದ್ದಿದೆ. ಇದರಿಂದಾಗಿ ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿರತೆ, ಕರಡಿ ಸೇರಿದಂತೆ ಕಾಡು ಪ್ರಾಣಿಗಳು ಆಹಾರ ಅರಸಿ ಕಾಡಿನಿಂದ ನಾಡಿನತ್ತ ಧಾವಿಸುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.
ಕಳೆದ ನಾಲ್ಕೈದು ತಿಂಗಳಿಂದ ಸಿದ್ದಗಂಗಾ ಮಠ ಸೇರಿದಂತೆ ಬೆಟ್ಟದ ಆಸುಪಾಸಿನಲ್ಲಿ ಕರಡಿ ಪ್ರತ್ಯಕ್ಷವಾಗುತ್ತಿತ್ತು. ಅಲ್ಲದೆ ರಾತ್ರಿ ವೇಳೆ ಮಠಕ್ಕೆ ನುಗ್ಗಿ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ಮೆಟ್ಟಿಲುಗಳ ಮೇಲೆ ಓಡಾಡುತ್ತಿದ್ದ ದೃಶ್ಯ ಸಹ ವೈರಲ್ ಆಗಿತ್ತು.
ಸಿದ್ದಗಂಗಾ ಮಠದಿಂದ ದೇವರಾಯನದುರ್ಗಕ್ಕೆ ತೆರಳು ಮಾರ್ಗಮಧ್ಯೆಯೂ ಹಲವು ಬಾರಿ ವಾಹನ ಸವಾರರಿಗೆ ಕರಡಿ ಎದುರಾಗಿತ್ತು. ಆ ಸಂದರ್ಭದಲ್ಲಿ ಪ್ರಯಾಣಿಸುತ್ತಿದ್ದವರು ಕರಡಿ ಓಡುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ್ದಿದ್ದರು.
ಪದೇ ಪದೇ ಸಿದ್ದಗಂಗಾ ಮಠದ ಬಳಿ ಕರಡಿ ಕಾಣಿಸಿಕೊಳ್ಳುತ್ತಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಲು ಕಳೆದ ೨ ತಿಂಗಳ ಹಿಂದೆಯೇ ಬೋನ್ ಇಟ್ಟಿದ್ದರು. ಈ ಬೋನಿಗೆ ರಾತ್ರಿ ಕರಡಿ ಸೆರೆಯಾಗಿದೆ.
ಕರಡಿ ಬೋನಿಗೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ಬೋನಿಗೆ ಬಿದ್ದಿರುವ ಕರಡಿ ಸುಮಾರು ೫ ವರ್ಷದ ಗಂಡು ಕರಡಿಯಾಗಿದ್ದು, ಈ ಕರಡಿಯನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಉರ್ಡಿಗೆರೆ ವಲಯದ ಉಪ ಅರಣ್ಯ ವಲಯಾಧಿಕಾರಿ ಮನು, ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿಗೆ ಕರಡಿ ಬಿದ್ದಿದ್ದು ಈ ಭಾಗದಲ್ಲಿ ಸಂಚರಿಸುವ ಜನರಿಗೆ ಈಗ ನಿಟ್ಟುಸಿರು ಬಿಡುವಂತಾಗಿದೆ. ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಜಾಗೃತರಾಗಿರಬೇಕು ಎಂದು ಹೇಳಿದರು.
ಅರಣ್ಯ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳಿಗೆ ನೀರು, ಆಹಾರದ ವ್ಯವಸ್ಥೆ ಮಾಡುವಂತೆ ಸರ್ಕಾರದ ಆದೇಶ ಇದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಈ ನಿಯಮವನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿರುವುದರಿಂದ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುವ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಜನ-ಜಾನುವಾರುಗಳು ತೀವ್ರ ಭಯಭೀತರಾಗುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿ ಚಿಕ್ಕ ರಾಜೇಂದ್ರ, ಆರ್‌ಎಫ್‌ಓ ನಟರಾಜ್, ಕೇಶವಮೂರ್ತಿ, ಬಾಲಕೃಷ್ಣ , ನರಸಿಂಹರಾಜು, ರಾಘವೇಂದ್ರ ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.