ಸಿದ್ದಗಂಗಾ ಮಠಕ್ಕೆ ಸಿಎಂ ಮಾಧ್ಯಮ ಸಲಹೆಗಾರ ಭೃಂಗೀಶ್ ಭೇಟಿ

ತುಮಕೂರು, ಡಿ. ೩- ನಗರದ ಸಿದ್ದಗಂಗಾ ಮಠಕ್ಕೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಎನ್. ಭೃಂಗೀಶ್ ಅವರು ಭೇಟಿ ನೀಡಿ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ, ಮಾಧ್ಯಮಿಕ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣದ ವರೆಗೆ ಶ್ರೀಮಠದಲ್ಲೇ ವ್ಯಾಸಂಗ ಮಾಡಿದ್ದೇನೆ. ನಂತರ ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದೆ. ಅಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕಾನೂನು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಅಭ್ಯಾಸ ಮಾಡಿದೆ ಎಂದು ಹೇಳಿದರು.
ನಾನು ಶ್ರೀಮಠದಲ್ಲಿದ್ದಾಗ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಸಂಸ್ಕೃತ, ಇಂಗ್ಲೀಷ್ ಸೇರಿದಂತೆ ಎಲ್ಲವನ್ನು ಚೆನ್ನಾಗಿ ಕಲಿಸಿ ಭದ್ರವಾದ ಅಡಿಪಾಯ ಹಾಕಿ ನಮ್ಮ ಶೈಕ್ಷಣಿಕ ಸಾಧನೆಗೆ ಬಹಳ ದೊಡ್ಡ ಮಟ್ಟದ ನೆರವಾದರು ಎಂದು ಸ್ಮರಿಸಿದರು.
ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ ಕೊಟ್ಟ ಗುರುಗಳು ಸಮಾಜ ಸುಧಾರಣೆಯ ಹರಿಕಾರರು. ನಾನು ಎಂದಿಗೂ ಶ್ರೀಮಠದ ಅನುಯಾಯಿಗಿರುತ್ತೇನೆ. ನನ್ನ ಮೇಲೆ ಶ್ರೀಗಳ ಆಶೀರ್ವಾದ ಸದಾ ಇರುತ್ತದೆ ಎಂದರು.
ಮಠದ ಪರಂಪರೆಯ ಭಾಗವಾಗಿ ನನ್ನಂತ ಎಷ್ಟೋ ವಿದ್ಯಾರ್ಥಿಗಳು ಇದ್ದೇವೆ. ಮುಂದೆಯೂ ಇರುತ್ತೇವೆ. ಇಡೀ ಜಗತ್ತಿಗೆ ಸಿದ್ದಗಂಗಾ ಮಠ ಹೆಸರುವಾಸಿಯಾಗಿದೆ. ದೇಶ ಸೇರಿದಂತೆ ಪ್ರಪಂಚದಾದ್ಯಂತ ಶ್ರೀಮಠದ ವಿದ್ಯಾರ್ಥಿಗಳು ಉದ್ಯೋಗಗಳಲ್ಲಿದ್ದಾರೆ ಎಂದರು.
ಇಂದು ಶ್ರೀಮಠಕ್ಕೆ ಬಂದು ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದೇವೆ. ಶ್ರೀಮಠದ ಹಳೆಯ ವಿದ್ಯಾರ್ಥಿಯಾಗಿರುವುದರಿಂದ ಮಠಕ್ಕೆ ಆಗಿಂದಾಗ್ಗೆ ಬರುತ್ತಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಮತ್ತಿತರರು ಉಪಸ್ಥಿತರಿದ್ದರು.