ಸಿದ್ದಗಂಗಾ ಆಸ್ಪತ್ರೆಯ ವಿಶ್ವದರ್ಜೆ ಚಿಕಿತ್ಸೆಯಿಂದ ಸೋಂಕಿತರ ಗುಣಮುಖ: ಡಾ. ಸ್ವಾಮಿ

ತುಮಕೂರು, ನ. ೨- ಅಧ್ಯಯನಗಳ ಪ್ರಕಾರ ವೆಂಟಿಲೇಟರ್ ದಾಖಲಾದ ಶೇ. ೯೫ ಕೋವಿಡ್ ರೋಗಿಗಳು ಬದುಕುಳಿಯುವ ಸಾಧ್ಯತೆ ಕಡಿಮೆ. ಆದರೆ ನಮ್ಮ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಾಗಿ ವೆಂಟಿಲೇಟರ್‌ನಲ್ಲಿದ್ದ ೫೫ ರಿಂದ ೭೦ ವಯೋಮಾನದ ಐದಕ್ಕೂ ಹೆಚ್ಚು ವೃದ್ಧರನ್ನು ವಿಶ್ವದರ್ಜೆಯ ಚಿಕಿತ್ಸೆ ಮೂಲಕ ಗುಣಮುಖರನ್ನಾಗಿಸಿದ್ದೇವೆ ಎಂದು ಐಸಿಯು ಸ್ಪೆಷಲಿಸ್ಟ್ ಡಾ.ಸಿ.ವಿ. ಸ್ವಾಮಿ ತಿಳಿಸಿದರು.
ಇಲ್ಲಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕೋವಿಡ್ ಸೋಂಕಿತರಾಗಿ ಐಸಿಯುಗೆ ದಾಖಲಾಗುವ ರೋಗಿಗಳಲ್ಲಿ ವೆಂಟಿಲೇಟರ್‌ನಲ್ಲಿರುವ ರೋಗಿಗಳು ಬದುಕುವ ಸಾಧ್ಯತೆ ಹಾಗೂ ಕೊರೊನಾ ಚಿಕಿತ್ಸಾ ಸಾಧ್ಯತೆಗಳ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಲೇ ಇದೆ. ಆದರೆ ನಾವು ಪ್ರತಿ ರೋಗಿಯ ಆರೋಗ್ಯವನ್ನು ಗಂಭೀರವಾಗಿ ಅಧ್ಯಯನ ಚಿಕಿತ್ಸೆ ನೀಡುತ್ತಿರುವುದು ನಮ್ಮಲ್ಲಿ ಯಾವುದೇ ವಯಸ್ಸಿನ ಕೋವಿಡ್ ಸೋಂಕಿತರು ಗುಣಮುಖರಾಗಲು ಸಹಕಾರಿಯಾಗಿದೆ ಎಂದರು.
ಜಿರಿಯಾಟ್ರಿಕ್ ತಜ್ಞೆ ಡಾ.ಶಾಲಿನಿ ಮಾತನಾಡಿ, ಕಳೆದ ೬ ತಿಂಗಳಿಂದ ನಾವು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ನಮಗೆ ಸಾರ್ಥಕ ಸೇವೆ ಮಾಡಿದ ಅನುಭವ ನೀಡಿದೆ. ವಯೋವೃದ್ಧರು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾದಾಗ ನಮ್ಮಲ್ಲಿ ಕೊರೊನಾ ವಿರುದ್ಧ ಹೋರಾಡುವ ಹುಮ್ಮಸ್ಸು ಜಾಸ್ತಿ ಮಾಡಿದೆ. ಗುಣಮುಖರಾದವರೇ ನಮ್ಮ ನಿಜವಾದ ಗೆಲುವಿನ ಸಂಕೇತ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೋವಿಡ್‌ನಿಂದ ಗುಣಮುಖರಾದ ಶ್ರೀನಿವಾಸಮೂರ್ತಿ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ನಮಗೆ ಮರುಜನ್ಮ ನೀಡಿದೆ. ಕೊರೊನಾದಿಂದ ಸಾವನ್ನಪ್ಪುತ್ತಿರುವ ಬಗ್ಗೆ ವರದಿ ಕೇಳಿ ಕೇಳಿ ಆತಂಕಗೊಂಡಿದ್ದೆ. ಆದರೆ ಇಲ್ಲಿನ ವೈದ್ಯರು ದೇಹಕ್ಕೆ ನೀಡುವ ಚಿಕಿತ್ಸೆ ಜತೆಗೆ ಡಾ.ಶಾಲಿನಿಯವರು ನೀಡುತ್ತಿದ್ದ ಮಾನಸಿಕ ಸ್ಥೈರ್ಯ ನಮಗೆ ಮರುಜನ್ಮ ನೀಡಿದೆ. ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಶುಶ್ರೂಷಕಿಯರಿಗೆಲ್ಲಾ ನನ್ನ ವಂದನೆಗಳು ಎಂದರು.
ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ. ಸಂಜೀವ್ ಕುಮಾರ್ ಮಾತನಾಡಿ, ಪ್ರಪಂಚದಲ್ಲಿ ೨.೫ ಕೋಟಿ ಸೋಂಕಿತರಿದ್ದು, ೧೦ ಲಕ್ಷ ಜನ ಸಾವನ್ನಪ್ಪಿರುವುದು ಕಳವಳಕಾರಿ. ಕೋವಿಡ್‌ನಿಂದ ಒಟ್ಟು ಸಾವಿನಲ್ಲಿ ಐಸಿಯು ದಾಖಲಾಗಿ ಸಾಯುವವರ ಸಂಖ್ಯೆ ಹೆಚ್ಚಿದ್ದು, ಇಂತಹ ಸಂದರ್ಭದಲ್ಲಿ ವಯೋವೃದ್ಧರನ್ನು ಸಾವಿನಿಂದ ಹೊರತಂದಿದ್ದು ನಮ್ಮ ಆಸ್ಪತ್ರೆಯ ಬದ್ಧತೆಯನ್ನ ಎತ್ತಿ ತೋರಿಸುತ್ತದೆ ಎಂದರು.
ನಮ್ಮ ಆಸ್ಪತ್ರೆಯ ವಿಶ್ವದರ್ಜೆಯ ಸುಸ್ಸಜ್ಜಿತ ಚಿಕಿತ್ಸಾ ಸೌಲಭ್ಯಗಳು ನುರಿತ ವೈದ್ಯರಿಂದಾಗಿ ನಾವು ಕೋವಿಡ್‌ನಿಂದ ೨೦೦೦ ಕ್ಕೂ ಹೆಚ್ಚು ಜನರನ್ನು ಗುಣಮುಖರನ್ನಾಗಿಸಿದ್ದೇವೆ ಎಂದು ಹೇಳಿದರು.
ಸೋಂಕಿನಿಂದ ಗುಣಮುಖರಾದ ವ್ಯಕ್ತಿಯಿಂದ ಧ್ವಜಾರೋಹಣ
ಸಿದ್ಧಗಂಗಾ ಆಸ್ಪತ್ರೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಅಪರೂಪದ ಕಾರ್ಯಕ್ರಮದ ಮೂಲಕ ನಾಡಿನ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿತು.
ನಾಡಿನ ಎಲ್ಲಾ ಕನ್ನಡಿಗರ ಪರವಾಗಿ ಕೋವಿಡ್‌ಗೆ ತುತ್ತಾಗಿ ಐಸಿಯುನಿಂದ ಗುಣಮುಖರಾಗಿ ಹೊರಬಂದ ವಯೋವೃದ್ಧರಿಂದ ದ್ವಜಾರೋಹಣ ನೆರವೇರಿಸಿದರು. ವಿಶೇಷ ಅತಿಥಿಯಾಗಿ ಆಗಿಮಿಸಿದ್ದ ಶ್ರೀನಿವಾಸ್ ಮೂರ್ತಿಯವರಿಗೆ ೫೭ ವರ್ಷ ವಯಸ್ಸಾಗಿದ್ದು, ಇತ್ತೀಚಗೆ ಕೋವಿಡ್‌ಗೆ ತುತ್ತಾಗಿ ಸಿದ್ಧಗಂಗಾ ಆಸ್ಪತ್ರೆಯಲ್ಲಿ ೧೫ ದಿನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.