ಸಿದ್ದಗಂಗಾ ಆಸ್ಪತ್ರೆಯಲ್ಲಿ ಕೊರೊನಾ ಗುಣಮುಖರ ಪ್ರತ್ಯೇಕ ಪರೀಕ್ಷಾ ಘಟಕ

ತುಮಕೂರು, ನ. ೮- ಇತ್ತೀಚಿನ ಅಧ್ಯಯನದಂತೆ ಕೊರೊನಾ ಸೋಂಕಿಗೆ ತಗುಲಿ ಗುಣಮುಖರಾದವರಲ್ಲಿ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಇದಕ್ಕಾಗಿಯೇ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೊರೊನಾದಿಂದ ಗುಣಮುಖರಾದವರಿಗಾಗಿ ಪ್ರತ್ಯೇಕ ಪರೀಕ್ಷಾ ಘಟಕ ತೆರೆಯಲಾಗಿದೆ ಎಂದು ಸಿದ್ಧಗಂಗಾ ಆಸ್ಪತ್ರೆಯ ಜಿರಿಯಾಟ್ರಿಕ್ ತಜ್ಞೆ ಡಾ. ಶಾಲಿನಿ ತಿಳಿಸಿದರು.
ಇಲ್ಲಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೋವಿಡ್ ಗುಣಮುಖರ ಪ್ರತ್ಯೇಕ ಘಟಕದ ಕುರಿತು ಮಾಹಿತಿ ನೀಡಿ ಪ್ರಸ್ತುತ ಕೋವಿಡ್ ಸೋಂಕಿತರಾಗಿ ಗುಣಮುಖರಾದವರಲ್ಲಿ ಎರಡನೇ ಅಲೆಯ ಕೋವಿಡ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಉಸಿರಾಟ, ಹೃದ್ರೋಗ, ಮೂತ್ರಪಿಂಡ, ಖಿನ್ನತೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಎರಡನೇ ಅಲೆಯ ಪರಿಣಾಮ ಕೆಲವೊಂದು ದೇಶಗಳು ಎರಡನೇ ಹಂತದ ಲಾಕ್‌ಡೌನ್ ಹೇರಿಕೆ ಮಾಡಿಕೊಂಡಿವೆ. ಭಾರತದಲ್ಲಿಯೂ ಎರಡನೇ ಅಲೆಯ ಕೋವಿಡ್ ಲಕ್ಷಣಗಳು ಆರಂಭವಾಗುತ್ತಿರುವುದರಿಂದ ನಾವು ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಗುಣಮುಖರ ಪ್ರತ್ಯೇಕ ಕ್ಲಿನಿಕ್ ನವಂಬರ್ ೬(ಶನಿವಾರ) ಕಾರ್ಯಾರಂಭ ಮಾಡಲಿದ್ದು, ಸೋಮವಾರದಿಂದ ಶನಿವಾರದವರೆಗೆ ಪ್ರತಿನಿತ್ಯ ೧೦ ಗಂಟೆಯಿಂದ ೨ ಗಂಟೆಯವರೆಗೂ ಸೇವೆ ಲಭ್ಯವಿದೆ ಎಂದರು.
ಕೋವಿಡ್‌ನಿಂದ ಗುಣಮುಖರಾಗಿ ಹೋಂ ಕ್ವಾರಂಟೈನ್‌ನಲ್ಲಿರುವವರಿಗೆ ಮತ್ತೊಮ್ಮೆ ಆರೋಗ್ಯ ಪರೀಕ್ಷೆಯ ಅವಶ್ಯಕತೆ ಇರುತ್ತದೆ. ಈ ಹಿಂದೆ ನಾವು ಕೋವಿಡ್‌ಗಾಗಿ ಆಸ್ಪತ್ರೆಯಲ್ಲೇ ಪ್ರತ್ಯೇಕ ಆಸ್ಪತ್ರೆ ತೆರೆದು ಎರಡು ಸಾವಿರಕ್ಕೂ ಗುಣಮುಖರನ್ನಾಗಿಸಿದ್ದೆವು. ಈಗ ಅದೇ ಮಾದರಿಯಲ್ಲಿ ಮತ್ತೊಂದು ಪ್ರತ್ಯೇಕ ಕ್ಲಿನಿಕ್ ತೆರೆದಿದ್ದು, ಕೋವಿಡ್ ಸೋಂಕಿನಿಂದ ಹೊರ ಬಂದು ಇನ್ನಿತರೆ ಆರೋಗ್ಯ ಸಮಸ್ಯೆ ಹೊಂದಿರುವವರು ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ಎಂ.ಡಿ. ಡಾ. ಎಸ್. ಪರಮೇಶ್ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಲಸಿಕೆ ಕಂಡು ಹಿಡಿಯುವುದು ನಿಧಾನವಾಗುತ್ತಿದೆ. ಇನ್ನೊಂದಡೆ ಜಗತ್ತು ಕೋವಿಡ್ ಎರಡನೇ ಅಲೆಗೆ ಸಿದ್ಧವಾಗುತ್ತಿದೆ. ಉಸಿರಾಟದ ಸಮಸ್ಯೆ, ಕಿಡ್ನಿ ಸಮಸ್ಯೆಯಿಂದ ಚಿಕಿತ್ಸೆಗೆ ಬಂದವರಲ್ಲೂ ಕೋವಿಡ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕೋವಿಡ್ ವೈರಸ್‌ಲೋಡ್ ಹೆಚ್ಚಾಗಿ ಶ್ವಾಸಕೋಶಕ್ಕೆ ಹಾನಿಯಾಗಿ ಹೃದಯಾಘಾತಗಳ ವರದಿಯೂ ಹೆಚ್ಚುತ್ತಿವೆ. ಕೋವಿಡ್ ವೈರಸ್ ಆರೋಗ್ಯ ಸಮಸ್ಯೆಗಳನ್ನ ತಂದೊಡ್ಡುತ್ತಿರುವುದು ಆತಂಕಕಾರಿಯಾಗಿದ್ದು, ಇದಕ್ಕೆ ಪ್ರಾಥಮಿಕ ಹಂತದಲ್ಲಿ ಕೋವಿಡ್‌ನಿಂದ ಗುಣಮುಖರಾದವರು, ಇನ್ನಿತರೆ ರೋಗಲಕ್ಷಣ ಉಳ್ಳವರು ತಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದರು.
ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ. ಸಂಜೀವ್‌ಕುಮಾರ್ ಮಾತನಾಡಿ, ಸಾಕಷ್ಟು ಕೋವಿಡ್‌ನಿಂದ ಗುಣಮುಖರಾದವರು ಮಾನಸಿಕ ಖಿನ್ನತೆ ಒಳಗಾಗುತ್ತಿದ್ದಾರೆ. ಕೋವಿಡ್ ಸೋಂಕಿತರನ್ನು ಸಮಾಜವೇ ದೂರ ಇಡುತ್ತಿದೆ. ಕೆಲವೊಬ್ಬರಿಗೆ ದೈಹಿಕ ಕ್ಷಮತೆ ಕೂಡ ಕುಂದುತ್ತಿದೆ. ಹಾಗಾಗಿ ನಮ್ಮ ಪ್ರತ್ಯೇಕ ಕೋವಿಡ್ ಗುಣಮುಖರಾದವರ ಕ್ಲಿನಿಕ್‌ನಲ್ಲಿ ಎಮರ್ಜೆನ್ಸಿ ಕೇರ್‌ನಿಂದ ಹಿಡಿದು, ಸೈಕಾಲಜಿ, ಫಿಜಿಯೋಥೆರಪಿ, ಕಾರ್ಡಿಯಾಲಜಿ, ನ್ಯೂರೋ, ಆರ್ಥೋಪೆಡಿಕ್, ಮದರ್ ಅಂಡ್ ಚೈಲ್ಡ್ ಕೇರ್, ಗ್ಯಾಸ್ಟ್ರೋಎಂಟರಾಲಜಿ, ಜರಿಯಾಟ್ರಿಕ್ ಮೆಡಿಸಿನ್, ನೆಫ್ರಾಲಜಿ ಸೇರಿದಂತೆ ಎಲ್ಲ ವಿಭಾಗದ ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿದ್ದು, ಕೋವಿಡ್ ಗುಣಮುಖರು, ಕೋವಿಡ್‌ನ ನಂತರ ಇತರೆ ರೋಗ ಲಕ್ಷಣ ಹೊಂದಿರುವವರು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಲು ಎಲ್ಲ ರೀತಿಯ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.