ಸಿಡಿ, ವೀಡಿಯೋ, ಆಡಿಯೋಗಳ ಬಗ್ಗೆ ವೈಜ್ಞಾನಿಕ ತನಿಖೆ: ಬೊಮ್ಮಾಯಿ

ಮಂಗಳೂರು, ಮಾ.೨೯- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಬಂದಿರುವ ಎಲ್ಲಾ ಸಿಡಿ, ವೀಡಿಯೋ, ಆಡಿಯೋಗಳ ಬಗ್ಗೆ ವೈಜ್ಞಾನಿಕ ತನಿಖೆ ಮಾಡಲಾಗುವುದು ಎಂದು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಕೇರಳ ಚುನಾವಣೆಯ ಪ್ರಚಾರದ ಹಿನ್ನೆಲೆಯಲ್ಲಿ ರವಿವಾರ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್ಸಿಗರು ಅಥವಾ ಇನ್ನೊಬ್ಬರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ಕಾನೂನುಬದ್ಧವಾಗಿಯೇ ಸರಕಾರ ಪ್ರಕರಣದ ತನಿಖೆ ಮಾಡಲಿದೆ. ಈ ಬಗ್ಗೆ ಯಾರೇ ಆಗಲಿ, ಯಾವುದೇ ಹೇಳಿಕೆ ಕೊಟ್ಟರೂ ಸರಕಾರ ತನ್ನದೇ ದಿಕ್ಕಿನಲ್ಲಿ ಕೆಲಸ ಮಾಡಲಿದೆ ಎಂದ ಬಸವರಾಜ್ ಬೊಮ್ಮಾಯಿ ಈ ಹಿಂದೆ ಕಾಂಗ್ರೆಸ್‌ನವರು ಮೇಟಿ ಪ್ರಕರಣದಲ್ಲಿ ಹೇಗೆ ನಡಕೊಂಡರು ? ಅವರೇನು ಪ್ರಕರಣ ದಾಖಲಿಸಿದರಾ ? ಹಾಗಾಗಿ ಕಾಂಗ್ರೆಸ್ಸಿಗರ ಹೇಳಿಕೆಗೆ ನಾವು ಮಹತ್ವ ಕೊಡುವುದೊಲ್ಲ ಎಂದು ಸ್ಪಷ್ಟಪಡಿಸಿದರು. ಎಸ್‌ಐಟಿಯಲ್ಲಿ ದಕ್ಷ ಅಧಿಕಾರಿಗಳಿದ್ದಾರೆ. ಅವರು ಕಾನೂನು ರೀತಿಯಲ್ಲೇ ಕೆಲಸ ಮಾಡುತ್ತಾರೆ. ಯಾರ ಪ್ರಭಾವಕ್ಕೆ ಮಣಿದು ಅವರು ಕೆಲಸ ಮಾಡುವುದಿಲ್ಲ. ತನಿಖೆಯ ಹಂತದಲ್ಲಿರುವಾಗ ನಾನು ಹೆಚ್ಚೇನು ಮಾತನಾಡಲು ಇಷ್ಟಪಡುವುದಿಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಚಪ್ಪಲಿ ಹಾರ ಎಸೆಯಲು ಯತ್ನಿಸಿದ ಘಟನೆಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಡಿಕೆಶಿಗೆ ಚಪ್ಪಲಿ ಹಾರ ಎಸೆದಿಲ್ಲ. ಹಿಂದಿನ ವಾಹನಕ್ಕೆ ಎಸೆದಿರಬಹುದು. ಈ ಬಗ್ಗೆ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದು, ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಯಾವುದೇ ಸಣ್ಣ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದಿದ್ದೇನೆ. ಪ್ರಮುಖ ಗಣ್ಯರಿಗೆ ಸೂಕ್ತ ಭದ್ರತೆ ನೀಡಲು ತಿಳಿಸಿದ್ದೇನೆ. ಕಾನೂನು ಕೈಗೆತ್ತಿಕೊಳ್ಳುವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು. ಅದಕ್ಕೂ ಮೊದಲು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವರು ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭ ಶಾಸಕ ಡಾ.ಭರತ್ ಶೆಟ್ಟಿ, ಪೊಲೀಸ್ ಆಯುಕ್ತ ಶಶಿಕುಮಾರ್, ದ.ಕ.ಜಿಲ್ಲಾ ಎಸ್ಪಿ ಬಿಎಂ ಲಕ್ಷ್ಮಿ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.