ಸಿಡಿ ಯುವತಿ ಹೇಳಿಕೆ ಸಂಚಲನ ಸೃಷ್ಟಿ: ಇಂದು ೪ನೇ ಆಡಿಯೋ ಬಿಡುಗಡೆ

ಬೆಂಗಳೂರು, ಮಾ. ೨೭- ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ರಾಸಲೀಲೆ ಸಿಡಿ ಯುವತಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರ ಹೆಸರು ಪ್ರಸ್ತಾಪಿಸಿರುವುದು ರಾಜಕೀಯ ಮಹತ್ವ ಪಡೆದುಕೊಂಡಿದೆ.
ಆದರೆ, ಸಿಡಿ ಯುವತಿ ಹೆಸರು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅದೇನೋ ನನಗೆ ಗೊತ್ತಿಲ್ಲ. ಅದನ್ನೆಲ್ಲಾ ಲಾಯರು ನೋಡಿಕೊಳ್ತಾರೆ ಎಂದಿದ್ದಾರೆ. ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಮಾತನಾಡಿ ಸಂತ್ರಸ್ತೆ ಯುವತಿಗೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದಿದ್ದಾರೆ.
ಸಿಡಿ ಯುವತಿ ತನಗಾಗಿರುವ ನೋವು, ಅವಮಾನ, ದುಃಖ-ದುಮ್ಮಾನದಿಂದ ಸಾವಿನತ್ತ ಮುಖ ಮಾಡಿದ್ದಾರೆ.
ಇಂದು ನಾಲ್ಕನೇ ಆಡಿಯೋ ಬಿಡುಗಡೆ ಮಾಡಿರುವ ಸಿಡಿ ಯುವತಿ ನಾನು ಸಾಯಬೇಕೋ, ಬದುಕಬೇಕೋ ಎಂಬುದೇ ಗೊತ್ತಾಗುತ್ತಿಲ್ಲ. ರಮೇಶ್ ಜಾರಕಿ ಹೊಳಿ ಹೆಸರು ಬರೆದು ಸತ್ತು ಬಿಡೋಣ ಎಂದೆನಿಸುತ್ತದೆ ಎಂದು ನೋವು ತೋಡಿಕೊಂಡಿದ್ದಾರೆ.
ನನ್ನ ಅಪ್ಪ, ಅಮ್ಮ ಹಾಗೂ ಸಹೋದರರನ್ನು ಬೆಂಗಳೂರಿಗೆ ಕರೆತಂದರೆ ಅವರುಗಳ ಸಮ್ಮುಖದಲ್ಲಿ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿ ಇಡೀ ಪ್ರಕರಣವನ್ನು ಬಹಿರಂಗಪಡಿಸುವೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ತೆರಳಿದ್ದನ್ನು ಖಚಿತಪಡಿಸಿರುವ ಸಿಡಿ ಯುವತಿ ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಮಾರ್ಚ್ ೨ ರಂದು ರಾಸಲೀಲೆ ಸಿಡಿ ಹೊರಗೆ ಬರುತ್ತಿದ್ದಂತೆಯೇ ಏನು ಮಾಡಬೇಕೆಂಬುದೆ ನನಗೆ ತಿಳಿಯಲಿಲ್ಲ. ಆಗಲೇ ನರೇಶ್ ಅಣ್ಣನನ್ನು ಸಂಪರ್ಕಿಸಿದೆ. ಇದಕ್ಕೆಲ್ಲ ರಾಜಕೀಯ ನಾಯಕರ ಬೆಂಬಲ ಬೇಕೆಂದು ಹೇಳಿ ನನ್ನನ್ನು ಸಮಾಧಾನಪಡಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜೊತೆ ಮಾತನಾಡಿ ಬೆಂಬಲ ಪಡೆಯೋಣ ಎಂದು ನರೇಶಣ್ಣ ನನಗೆ ಹೇಳಿದ್ದ ಎಂದು ಯುವತಿ ಹೇಳಿ ಕೊಂಡಿದ್ದಾಳೆ.
ರಾಸಲೀಲೆ ಸಿಡಿ ಬಹಿರಂಗವಾಗುತ್ತಿದ್ದಂತೆ ಮನೆಯಿಂದ ನಿರಂತರ ಕರೆಗಳು ಬರುತ್ತಿದ್ದವು. ತಂದೆ-ತಾಯಿ, ಸಹೋದರ ಭಯಭೀತರಾಗಿದ್ದರು. ಅವರೆನ್ನೆಲ್ಲಾ ನಾನೇ ಸಮಾಧಾನ ಮಾಡಿದ್ದೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಸುರಕ್ಷಿತವಾಗಿದ್ದೇನೆ ಎಂದು ಯುವತಿ ತಿಳಿಸಿದ್ದಾಳೆ.
ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆಗೆ ಹೋಗಿದ್ದು ನಿಜ. ಆದರೆ ಅವರ ಭೇಟಿ ಸಾಧ್ಯವಾಗಲಿಲ್ಲ. ಹೀಗಾಗಿ ವಾಪಾಸು ಬಂದೆ ಎಂದಿದ್ದಾಳೆ.
ತಂದೆ-ತಾಯಿ, ಸಹೋದರನ ಮೊಬೈಲ್ ಸಂಭಾಷಣೆ ಎಲ್ಲೆಡೆ ಹರಿದಾಡುತ್ತಿದೆ. ಇದನ್ನು ನೋಡಿದರೆ, ಕುಟುಂಬದವರು ಭಯದಲ್ಲಿರುವಂತೆ ಕಾಣುತ್ತಿದೆ. ದಯವಿಟ್ಟು ಅವರನ್ನು ಪೊಲೀಸರು ರಕ್ಷಿಸಬೇಕು. ಅಮ್ಮ-ಅಪ್ಪ, ಇಬ್ಬರೂ ಸಹೋದರರನ್ನು ಬೆಂಗಳೂರಿಗೆ ಕರೆತಂದು ಭದ್ರತೆ ನೀಡಬೇಕು. ಅವರ ಎದುರು ನಾನು ಪೊಲೀಸರಿಗೆ ಹೇಳಿಕೆ ನೀಡುತ್ತೇನೆ’ ಎಂದೂ ತಿಳಿಸಿದ್ದಾರೆ.
‘ಟಿ.ವಿ.ಯವರು ಯಾವುದೇ ಸುದ್ದಿ ಮಾಡಿದರೂ, ಅದು ನಿಜವೋ – ಸುಳ್ಳೋ ಎಂದು ತಿಳಿದುಕೊಂಡು ಮಾಡಬೇಕು. ಇಲ್ಲಸಲ್ಲದ ಸುದ್ದಿ ಹಾಗೂ ಏನೋ ಮಾಡಲು ಹೋಗಿ ಇನ್ನೇನೋ ಆಗುತ್ತಿದೆ. ಇದರಿಂದ ತುಂಬಾ ಕಿರುಕುಳವಾಗುತ್ತಿದೆ’ ಎಂದು ಯುವತಿ ಹೇಳಿದ್ದಾರೆ.
ಪ್ರಕರಣದ ಸಂಬಂಧ ವಿಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪವಾಗಿರುವುದರಿಂದ ರಾಜಕೀಯ ಮಹತ್ವ ಪಡೆದುಕೊಂಡಿದ್ದು ಆಡಳಿತ ಪ್ರತಿಪಕ್ಷದ ಮುಖಂಡರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದೆ.
ಡಿಕೆಶಿ ಹೆಸರು ಪ್ರಸ್ತಾಪ:
ಈ ನಡುವೆ ನಿನ್ನೆ ರಾತ್ರಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಡರಾತ್ರಿ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಪ್ರಕರಣದ ಸಂಬಂಧ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಗ್ರಪ್ಪ, ಅಶೋಕ ಪಟ್ಟಣ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಇದೇ ಸಂದರ್ಭ ಸಿಡಿ ವಿಚಾರವಾಗಿಯೂ ಚರ್ಚೆ ನಡೆದಿದೆ.
ಕದ್ದಾಲಿಕೆ ಭಯ:
ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ, ಕಾಂಗ್ರೆಸ್ ನಾಯಕರು ಆಡಿಯೋ ಬಿಡುಗಡೆ ಬೆನ್ನಲ್ಲೇ ಕದ್ದಾಲಿಕೆ ಭಯ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಇದೇ ವಿಷಯವನ್ನು ಬಿಜೆಪಿಯವರು ಪ್ರಮುಖವಾಗಿ ಪ್ರಸ್ತಾಪ ಮಾಡಬಹುದು. ಇಷ್ಟು ದಿನ ಕೇಸ್ ನಮ್ಮ ಪರ ಇತ್ತು, ಒಂದೇ ದಿನದಲ್ಲಿ ಬಿಜೆಪಿ ಪರ ಹೋಯಿತು. ಬೆಳಗಾವಿ ಉಪಚುನಾವಣೆ ಮೇಲೆ ಭಾರೀ ಪರಿಣಾಮ ಬೀರಬಹುದು ಎಂಬೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ನಿನ್ನೆ ಬಿಡುಗಡೆ ಮಾಡಿರುವ ೬ ನಿಮಿಷ ೫೯ ಸೆಕೆಂಡ್‌ಗಳ ವಿಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರೂ ಸಹ ಪ್ರಸ್ತಾಪವಾಗಿದೆ. ಯುವತಿ ತನ್ನ ತಂದೆ-ತಾಯಿ ವಿಚಾರವಾಗಿ ಮಾತನಾಡಿದ ಸಂದರ್ಭ ರಾಜ್ಯದ ನಾಯಕರೊಬ್ಬರ ಹೆಸರು ಪ್ರಸ್ತಾಪವಾಗಿದೆ. ಇದೀಗ ಈ ವಿಚಾರ ಇಡೀ ಪ್ರಕರಣಕ್ಕೆ ತಿರುವು ನೀಡುವ ಸಾಧ್ಯತೆಗಳು ಗೋಚರಿಸುತ್ತಿವೆ.

ರಾಸಲೀಲೆ ಸಿಡಿ ಸಂಜೆ ದೊಡ್ಡ ಸುದ್ದಿ ಸ್ಫೋಟ: ಜಾರಕಿಹೊಳಿ
ರಾಸಲೀಲೆ ಸಿಡಿಯಲ್ಲಿದ್ದ ಯುವತಿ ಮಾತನಾಡಿರುವ ಆಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಸಂಜೆ ವೇಳೆಗೆ ದೊಡ್ಡ ಬಾಂಬ್ ಸ್ಫೋಟವಾಗುತ್ತದೆ ಎಂದು ಹೇಳಿರುವುದು ಕುತೂಹಲ ಕೆರಳಿಸಿದೆ.
ಸಂಜೆ ೪ ರಿಂದ ೬ ಗಂಟೆಯೊಳಗೆ ದೊಡ್ಡ ಬಾಂಬ್ ಸ್ಫೋಟವಾಗುತ್ತದೆ. ದೊಡ್ಡ ಮಟ್ಟದ ಬೆಳವಣಿಗೆ ಆಗಲಿದ್ದು, ನಾನೇ ಆಗ ಮಾತನಾಡುತ್ತೇನೆ. ಅಲ್ಲಿಯವರೆಗೆ ವಕೀಲರು ಏನನ್ನೂ ಮಾತನಾಡದಂತೆ ಸಲಹೆ ನೀಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನು ತಪ್ಪು ಮಾಡಿಲ್ಲ. ನಾನು ಜಾಮೀನು ಪಡೆಯುವುದಿಲ್ಲ. ಆ ಹೆಣ್ಣು ಮಗಳೇ ನಕಲಿ ಎಂದು ಹೇಳಿದ್ದಾಳೆ. ಇದು ಟ್ರೈಲರ್ ಎಂದು ಹೇಳಲ್ಲ, ಇನ್ನೂ ಸಾಕಷ್ಟು ಇದೆ. ಸಂಜೆ ಇನ್ನಷ್ಟು ಮಾಹಿತಿ ಮಾಧ್ಯಮದ ಮತ್ತು ರಾಜ್ಯದ ಜನರ ಮುಂದೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.
ಜತೆಗೆ ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ಆಗಿರುವುದು ತಿಳಿದಿದೆ. ತನಿಖೆ ಆಗಲಿ, ಮುಂದೆ ಏನೆಂದು ನೋಡೋಣ.
ಡಿಕೆಶಿ ಹಳೆಯ ಗೆಳೆಯ:
ನನ್ನ ಕಷ್ಟ ಕಾಲದಲ್ಲಿ ಕೂಡಿ ಬಂದವರು. ಅವರ ಬಗ್ಗೆ ನಾನು ಆರೋಪ ಮಾಡುವುದಿಲ್ಲ. ಯಾವುದೇ ಸಾಕ್ಷಿ ಆಧಾರಗಳಿಲ್ಲದೇ ಏನು ಹೇಳಲ್ಲ. ಡಿ.ಕೆ. ಶಿವಕುಮಾರ್‌ಗೆ ಒಳ್ಳೆಯದಾಗಲಿ ಎಂದಿದ್ದಾರೆ.

ಎಸ್‌ಐಟಿ ಮುಂದೆ ರಾಸಲೀಲೆ ಯುವತಿ ಪೋಷಕರು ಹಾಜರು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ’ಸಂತ್ರಸ್ತ’ ಯುವತಿಯ ಪೋಷಕರು ವಿಶೇಷ ತನಿಖಾ ತಂಡ (ಎಸ್?ಐಟಿ)ಅಧಿಕಾರಿಗಳ ವಿಚಾರಣೆಗೆ ಇಂದು ಬೆಳಗ್ಗೆ ಹಾಜರಾಗಿದ್ದಾರೆ.
ಆಡುಗೋಡಿಯ ಟೆಕ್ನಿಕಲ್ ವಿಂಗ್ ನಲ್ಲಿ ಹಾಜರಾದ ಯುವತಿ ಪೋಷಕರನ್ನು ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಯುವತಿಯ ಪೋಷಕರಿಗೆ ಅಧಿಕಾರಿಗಳು, ನಿಮ್ಮ ಮಗಳನ್ನ ಕೊನೆಯ ಬಾರಿ ಭೇಟಿಯಾಗಿದ್ದು ಯಾವಾಗ, ಆ ವೇಳೆ ಯಾವ ವಿಚಾರ ಪ್ರಸ್ತಾಪ ಮಾಡಿದ್ದರು ವಿಡಿಯೋ ಬಿಡುಗಡೆಯಾದ ಬಳಿಕ ಎಷ್ಟು ಬಾರಿ ಮಗಳನ್ನ ಸಂಪರ್ಕಿಸಿದ್ದೀರಿ,
ಕರೆ ಮಾಡಿದಾಗ ಏನೆಲ್ಲ ಹೇಳಿದ್ದರು, ಯಾರ ಬಳಿ ಇರುವುದಾಗಿ ಹೇಳಿದ್ದರು. ಈಗ ನಿಮ್ಮ ಮಗಳು ಎಲ್ಲಿದ್ದಾಳೆ, ಆಕೆಗೆ ಯಾರಾದ್ರು ಬಲವಂತವಾಗಿ ಹೆದರಿಸಿದ್ದಾರಾ ನಿಮ್ಮ ಕುಟುಂಬಕ್ಕೆ ಬೆದರಿಕೆ ಇದೀಯಾ, ಒಂದು ವೇಳೆ ಬೆದರಿಕೆ ಇದರಿಂದ ಹೀಗೆ ನಾನಾ ಆಯಾಮದಲ್ಲಿ ಮಾಹಿತಿ ಕಲೆ ಹಾಕಲಿದ್ದಾರೆ.
ಸಿಡಿ ಪ್ರಕರಣ ಬೆಳಕಿಗೆ ಬಂದ ಕೆಲ ದಿನಗಳ ಬಳಿಕ ಯುವತಿಯ ಪೋಷಕರು ’ನನ್ನ ಮಗಳು ಕಾಣೆಯಾಗಿದ್ದಾಳೆ’ ಎಂದು ಬೆಳಗಾವಿಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.ಯಾರ ಸಂಪರ್ಕಕ್ಕೂ ಸಿಗದೆ ಯುವತಿ ಕುಟುಂಬಸ್ಥರು ದೂರ ಉಳಿದಿದ್ದರು.
ಈ ನಡುವೆ ಯುವತಿ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ, ತನ್ನ ತಂದೆ-ತಾಯಿಗೆ ಜೀವ ಬೆದರಿಕೆ ಇದೆ. ಅವರನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಅವರು ಸುರಕ್ಷಿತರಾಗಿದ್ದಾರೆಂದು ಗೊತ್ತಾದ ಬಳಿಕೆ ಎಸ್‌ಐಟಿ ಮುಂದೆ ಹಾಜರಾಗುವೆ ಎಂದಿದ್ದಳು. ಇಂದು ಬೆಳಗ್ಗೆ ಬಿಡುಗಡೆ ಮಾಡಿದ್ದ ೪ನೇ ವಿಡಿಯೋದಲ್ಲಿ, ತನ್ನ ತಂದೆ-ತಾಯಿಯನ್ನು ಬೆಂಗಳೂರಿಗೆ ಕರೆತರಬೇಕು. ಅವರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಳು.
ಇದೀಗ ಎಸ್‌ಐಟಿ ಮುಂದೆ ಯುವತಿ ಪೋಷಕರು ಹಾಜರಾಗಿದ್ದು, ಯುವತಿಯೂ ಪ್ರತ್ಯಕ್ಷ ಆಗುತ್ತಾಳಾ ಎಂಬ ಪ್ರಶ್ನೆ ಮೂಡಿದೆ.