ಸಿಡಿ ಯುವತಿ ಭೇಟಿ ಮಾಡಿಲ್ಲ ; ಡಿಕೆಶಿ

ಬೆಂಗಳೂರು, ಮಾ. ೨೭- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ನನ್ನ ಕಛೇರಿಗೆ ಬಂದಿರಬಹುದು. ಆದರೆ ಆ ಯುವತಿಯನ್ನು ನಾನು ಭೇಟಿ ಮಾಡಿಲ್ಲ. ಈಗಲೂ ನನ್ನನ್ನು ಭೇಟಿಯಾದರೆ ಆಕೆಗೆ ಸಹಾಯ ಮಾಡಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ತಮಿಳುನಾಡಿಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣದ ಸಂತ್ರಸ್ತ ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು. ಆದರೆ ಆಕೆ ನನ್ನನ್ನು ಭೇಟಿಯಾಗಿಲ್ಲ. ನೊಂದವರು ಪ್ರಾಮಾಣಿಕವಾಗಿದ್ದರೆ ಸಹಾಯ ಮಾಡುತ್ತೇನೆ. ಹಾಗೆಯೇ ಯುವತಿಗೆ ನಿಜವಾಗಲೂ ಅನ್ಯಾಯವಾಗಿದ್ದರೆ ಆಕೆಯ ಪರ ನಿಲ್ಲುತ್ತೇನೆ ಎಂದರು.
ನಾವು ರಾಜಕಾರಣಿಗಳು. ಸಾರ್ವಜನಿಕ ಜೀವನದಲ್ಲಿ ಇರುವವರು. ಯಾರೇ ನೊಂದವರು ಕಷ್ಟ ಎಂದು ಬಂದರೆ ಅಂತಹವರಿಗೆ ಸಹಾಯ ಮಾಡುವ ಪ್ರವೃತ್ತಿ ಹೊಂದಿರುತ್ತೇವೆ. ಹಾಗೆಯೇ ಆ ಹೆಣ್ಣು ಮಗಳು ನನ್ನ ಭೇಟಿಗೆ ಪ್ರಯತ್ನಿಸಿದ್ದೆ ಎಂದು ಹೇಳಿದ್ದಾಳೆ ಅಷ್ಟೆ ,ಸಂಕಷ್ಟ ಹೇಳಿಕೊಂಡು ಬಂದವರಿಗೆ ಸಹಾಯ ಮಾಡುತ್ತೇನೆ. ದಿನ ಬೆಳಗಾದರೆ ನನ್ನ ಮನೆ ಬಳಿ ಅನೇಕರು ಬರುತ್ತಾರೆ. ಹಣಕಾಸು ಸಮಸ್ಯೆ, ಕೌಟುಂಬಿಕ ಸಮಸ್ಯೆ, ಸರ್ಕಾರದಿಂದ ತೊಂದರೆ ಎಲ್ಲ ರೀತಿಯ ಸಮಸ್ಯೆಗಳನ್ನು ಹೊತ್ತು ತರುತ್ತಾರೆ. ಎಲ್ಲರಿಗೂ ಕೈಲಾದ ಸಹಾಯ ಮಾಡುತ್ತೇನೆ. ಅದೇ ರೀತಿ ಈ ಯುವತಿಯೂ ನನ್ನ ಕಛೇರಿಗೆ ಬಂದಿರಬಹುದು ಎಂದರು.
ಸಿಡಿ ಪ್ರಕರಣದ ಶಂಕಿತ ಆರೋಪಿ ಮಾಜಿ ಪತ್ರಕರ್ತ ನರೇಶ್ ಅವರ ಬಗ್ಗೆಯೂ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ನರೇಶ್ ಮಾಧ್ಯದವ. ನನಗೆ ಪರಿಚಯಸ್ಥ. ನನಗೆ ಬೇಕಾದ ಹುಡುಗ ಅವರ ಮನೆಗೂ ಹೋಗಿದ್ದೇನೆ. ಅನೇಕ ಬಾರಿ ಭೇಟಿ ಮಾಡಿದ್ದೇನೆ. ಹಲವು ವಿಚಾರಗಳನ್ನು ಆತ ನನಗೆ ಹೇಳಿದ್ದಾನೆ. ಆ ವಿಚಾರಗಳು ಸಿಡಿ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
ರಮೇಶ್ ಜಾರಕಿಹೊಳಿ ಟ್ರ್ಯಾಕ್ ಮಾಡಿದ್ದ ನಿಜ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಶಾಸಕರನ್ನು ಸೆಳೆಯುತ್ತೇವೆ ಎಂದಾಗ ನಾನು ಅವರನ್ನು ಟ್ರ್ಯಾಕ್ ಮಾಡಿದ್ದು ನಿಜ. ಯಾರ ಜತೆ ಮಾತನಾಡಿದ್ದಾರೆ, ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆ ನಿಗಾ ವಹಿಸಿದ್ದೇವು. ಆದರೆ ಅವರ ವೈಯುಕ್ತಿಕ ವಿಚಾರದ ಬಗ್ಗೆ ನನಗೆ ಆಸಕ್ತಿ ಇರಲಿಲ್ಲ. ಇದರ ಅವಶ್ಯಕತೆಯೂ ನಮಗಿಲ್ಲ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಾದ ನನ್ನನ್ನು ನೆನಪಿಸಿಕೊಂಡರೆ ನಾನ್ಯಾಕೆ ಬೇಡ ಎನ್ನಲಿ. ನನ್ನ ಬಗ್ಗೆ ಅವರಿಗೆ ಅನುಕುಂಪ ಇರುವುದಕ್ಕೆ ಬಹಳ ಸಂತೋಷ ಅವರ ವೈಯುಕ್ತಿ ವಿಚಾರಗಳು ನನಗೆ ಬೇಕಾಗಿಲ್ಲ. ಅವೆಲ್ಲಾ ಅನಾವಶ್ಯಕ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಯಾರಿಗೆ ಆಗಲಿ ರಕ್ಷಣೆ ನೀಡುವುದು ಸರ್ಕಾರದ ಕೆಲಸ. ಯುವತಿಯ ಪೋಷಕರು ಯಾರ ಬಳಿ ಇದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾನು ಅದನ್ನು ಯಾಕೆ ಟ್ರ್ಯಾಕ್ ಮಾಡಲಿ. ಪೊಲೀಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಅವರೆ ಎಲ್ಲ ನೋಡಿಕೊಳ್ಳುತ್ತಾರೆ ಎಂದರು.
ತಮಿಳುನಾಡಿನಲ್ಲಿ ಪ್ರಚಾರ
ತಮಿಳುನಾಡಿನ ಕೆಲವು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಸ್ನೇಹಿತರು ಸ್ಪರ್ಧಿಸಿದ್ದಾರೆ. ಅವರ ಪರ ಇಂದಿನಿಂದ ಪ್ರಚಾರ ನಡೆಸುತ್ತೇನೆ ಎಂದು ಅವರು ಹೇಳಿದರು.