ಸಿಡಿ ಯುವತಿ ಜತೆ ಸಂಬಂಧವಿಲ್ಲ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಏ. ೪- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣದ ಯುವತಿಗೂ, ನನಗೂ ಯಾವುದೇ ಸಂಬಂಧ ಇಲ್ಲ. ಸಾರ್ವಜನಿಕರಿಂದ ನನಗೆ ನೂರಾರು ದೂರವಾಣಿ ಕರೆ ಬರುತ್ತವೆ ಎಂದಿರುವ ಮಾಜಿ ಸಚಿವ ಡಿ. ಸುಧಾಕರ್ ಸಿ.ಡಿ. ಲೇಡಿಯನ್ನು ನಾನೆಂದೂ ಭೇಟಿಯೂ ಮಾಡಿಲ್ಲ. ಆದರೂ ಈ ಪ್ರಕರಣದಲ್ಲಿ ನನ್ನ ಹೆಸರು ಕೇಳಿ ಬರುತ್ತಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ.
ಚಿತ್ರದುರ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಡಿ. ಲೇಡಿಯ ಜತೆ ತಮಗೆ ಸಂಪರ್ಕ ಇತ್ತು ಎಂಬ ವರದಿಗಳನ್ನು ತಳ್ಳಿ ಹಾಕಿ ಏಕೆ ಈ ರೀತಿ ವರದಿಗಳು ಸೃಷ್ಠಿಯಾಗುತ್ತವೋ ಗೊತ್ತಿಲ್ಲ. ಈ ಸಿ.ಡಿ. ಪ್ರಕರಣಕ್ಕೂ, ಸಿ.ಡಿ. ಲೇಡಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕ ಜೀವನದಲ್ಲಿರುವ ತಮಗೆ ಪ್ರತಿನಿತ್ಯ ನೂರಾರು ಕರೆ ಬರುತ್ತವೆ. ಹಾಗೆಂದು ಎಲ್ಲರ ಜತೆಯೂ ನಮ್ಮ ಸಂಪರ್ಕ ಇರುತ್ತದೆಯೇ. ಸಿ.ಡಿ. ಸಂತ್ರಸ್ತ ಯುವತಿ ಜತೆ ನನ್ನ ಸಂಪರ್ಕ ಇದ್ದಿದ್ದರೆ ಇಷ್ಟೊತ್ತಿಗೆ ಇಂಜೆಕ್ಷನ್ ಆರ್ಡರ್ ಪಡೆಯುತ್ತಿದ್ದೆ. ನನಗೆ ಯಾವುದೇ ಭಯ ಇಲ್ಲ. ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ವಿಚಾರಣೆಗೆ ಹಾಜರಾಗಿ ಎಲ್ಲವನ್ನು ಸ್ಪಷ್ಟಪಡಿಸುತ್ತೇನೆ ಎಂದರು.
ಸಿ.ಡಿ. ಯುವತಿಯೊಂದಿಗೆ ಯಾವುದೇ ಹಣಕಾಸಿನ ವ್ಯವಹಾರವನ್ನೂ ಮಾಡಿಲ್ಲ. ಆಕೆಗೆ ೧೦ ರೂಪಾಯಿ ಕೂಡ ಹಣ ವರ್ಗಾವಣೆ ಮಾಡಿಲ್ಲ. ನನಗೆ ಹನಿಟ್ರ್ಯಾಪ್ ಮಾಡಿಯೂ ಇಲ್ಲ. ಆ ಯುವತಿಯನ್ನು ಭೇಟಿಯೂ ಮಾಡಿಲ್ಲ. ಇಷ್ಟಾದರೂ ಈ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುತ್ತಿರುವುದು ಅಚ್ಚರಿ ತಂದಿದೆ ಎಂದು ಅವರು ಹೇಳಿದರು.
ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನನಗೆ ಎಸ್‌ಐಟಿಯಿಂದ ನೋಟಿಸ್ ಬಂದಿಲ್ಲ. ನೋಟಿಸ್ ಬಂದರೆ ಎಸ್‌ಐಟಿ ಮುಂದೆ ಹಾಜರಾಗಿ ಸತ್ಯ ಹೇಳುತ್ತೇನೆ. ನನಗೆ ಯಾವುದೇ ಭಯ ಇಲ್ಲ ಎಂದು ಮಾಜಿ ಸಚಿವ ಸುಧಾಕರ್ ಹೇಳಿದರು.