ಸಿಡಿ ಯುವತಿಯ ಹೊಸ ಅವತಾರ


ಬೆಂಗಳೂರು,ಮಾ.೨೫- ರಾಜ್ಯ ರಾಜಕೀಯದಲ್ಲಿ ಸುಂಟರಗಾಳಿ ಸೃಷ್ಟಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ ಹೊಸಅವತಾರ ಪ್ರದರ್ಶಿಸಿದ್ದಾಳೆ.
ನನ್ನ ತಂದೆ – ತಾಯಿ ಸುರಕ್ಷತೆ ಬಗ್ಗೆ ನನಗೆ ನಂಬಿಕೆ ಬಂದರೆ, ಎಸ್‌ಐಟಿ ಮುಂದೆ ನಾನೇ ಹಾಜರಾಗಿ ಪೊಲೀಸ್ ಅಧಿಕಾರಿಗಳಿಗೆ ನಾನೇ ವಿಡಿಯೋ ತಲುಪಿಸುವೆ ಎಂದು ಹೊಸಬಾಂಬ್ ಸಿಡಿಸಿದ್ದಾಳೆ.
ವಿಡಿಯೋ ಬಿಡುಗಡೆ ಮಾಡಿರುವ ಯುವತಿ ತಾನಿರುವ ಸ್ಥಳದ ರಹಸ್ಯವನ್ನು ಬಹಿರಂಗಪಡಿಸದೆ, ನನ್ನ ಬಗ್ಗೆ ತಂದೆ – ತಾಯಿ ದೂರು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.
ನಾನು ಏನು ಹೇಳಿಕೆ ನೀಡಬೇಕು ನೀಡುತ್ತೇನೆ. ಮಹಿಳಾ ಸಂಘಟನೆಗಳು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾಳೆ.
ಕಳೆದ ಮಾರ್ಚ್ ೧೨ ರಂದೇ ನಗರ ಪೊಲೀಸ್ ಆಯುಕ್ತರಿಗೆ ವಿಡಿಯೋ ಕಳಿಸಿದ್ದೆ. ಅದರೆ ನಾನು ವಿಡಿಯೋ ಕಳಿಸಿದ್ದ ದಿನ ಬಿಡಗುಡೆ ಆಗಿಲ್ಲ. ಮಾರ್ಚ್ ೧೩ ರಂದು ರಮೇಶ್ ಜಾರಕಿಹೊಳಿ ದೂರು ನೀಡಿದ ಬಳಿಕ ವಿಡಿಯೋ ರಿಲೀಸ್ ಮಾಡಲಾಗಿದೆ.
ಹೀಗಾಗಿ ನನಗೆ ಏನಾಗುತ್ತಿದೆ ಅರ್ಥವಾಗುತ್ತಿಲ್ಲ ಎಸ್‌ಐಟಿ ಯಾರ ಪರವಾಗಿದ್ದಾರೆ ಎಂಬುದು ಅರ್ಥವಾಗಿಲ್ಲ. ನಮ್ಮ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ.
ಮೊಬೈಲ್‌ಗಳ ಹ್ಯಾಕ್:
ಈ ನಡುವೆ ಸಿಡಿ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ತಮ್ಮ ವಿರುದ್ಧ ಯಾವ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಯಲು ತನಿಖಾಧಿಕಾರಿಗಳ ಮೊಬೈಲ್‌ಗಳನ್ನೇ ಹ್ಯಾಕ್ ಮಾಡಲು ಮುಂದಾಗಿದ್ದ ವಿಚಾರ ಬೆಳಕಿಗೆ ಬಂದಿದೆ.
ಪ್ರಕರಣದ ಕಿಂಗ್‌ಪಿನ್ ಪತ್ರಕರ್ತ ನರೇಶ್‌ಗೌಡ, ಶ್ರವಣ್, ಸಿಡಿ ಪ್ರಕರಣದ ಯುವತಿ, ಉದ್ಯಮಿ ಶಿವಕುಮಾರ್, ಕಾರು ಚಾಲಕ ನಾಪತ್ತೆಯಾಗಿದ್ದಾರೆ. ಈ ಪೈಕಿ ಶ್ರವಣ್ ತಾಂತ್ರಿಕ ಪರಿಣಿತ ಕೆಲವು ಆಪ್‌ಗಳು, ಸಾಫ್ಟ್‌ವೇರ್‌ಗಳನ್ನು ಬಳಸಿ ಲೊಕೇಶನ್‌ಗಳನ್ನೇ ಹ್ಯಾಕ್ ಮಾಡಿ. ಉತ್ತರ ಭಾರತದ ರಾಜ್ಯಗಳಲ್ಲಿ ತಲೆಮರೆಸಿಕೊಂಡು ಬೆನ್ನತ್ತಿರುವ ಎಸ್‌ಐಟಿ ಅಧಿಕಾರಿಗಳ ದಿಕ್ಕುತಪ್ಪಿಸುತ್ತಿದ್ದಾರೆ.
ಗೊತ್ತಾಗಿದ್ದು ಹೇಗೆ:
ಇತ್ತೀಚೆಗೆ ಎಸ್‌ಐಟಿಯ ಕೆಲವು ಅಧಿಕಾರಿಗಳಿಗೆ ನಿರಂತರವಾಗಿ ವಾಟ್ಸ್ ಆಪ್ ಒಟಿಪಿ ಸಂದೇಶಗಳು ಬಂದಿವೆ. ಅನುಮಾನಗೊಂಡ ಅಧಿಕಾರಿಗಳು ಸೈಬರ್ ವಿಭಾಗದಲ್ಲಿ ಪರಿಶೀಲಿಸಿದಾಗ ಹ್ಯಾಕಿಂಗ್ ಒಟಿಪಿಗಳಾಗಿದ್ದು, ನಿರ್ದಿಷ್ಟ ವ್ಯಕ್ತಿಯೇ ಈ ರೀತಿ ಮಾಡುತ್ತಿದ್ದಾನೆ ಎಂಬುದು ಪತ್ತೆಯಾಗಿದೆ.
ಅದರ ಜಾಡು ಹಿಡಿದಾಗ ಸಿಡಿ ಆರೋಪಿಗಳೇ ಈ ಕೃತ್ಯ ಎಸಗುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಐವರಿಗೆ ಶೋಧ:
ಆರೋಪಿಗಳ ಬೆನ್ನುಬಿದ್ದ ಎಸ್‌ಐಟಿ ಅಧಿಕಾರಿಗಳಿಗೆ ಮಾ. ೧೦ರಿಂದ ೧೮ರ ವರೆಗೆ ನರೇಶ್‌ಗೌಡ, ಶ್ರವಣ್, ಸಿಡಿ ಲೇಡಿ, ಉದ್ಯಮಿ ಶಿವಕುಮಾರ್, ಆತನ ಕಾರು ಚಾಲಕ ಒಟ್ಟಿಗೆ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಹೊಟೇಲ್, ಲಾಡ್ಜ್‌ಗಳ ನೋಂದಣಿ ಪುಸ್ತಕದಲ್ಲಿ ಒಬ್ಬರ ಹೆಸರು ಬರೆದು +೨, +೫ ಎಂದು ನಮೂದಿಸಿದ್ದಾರೆ. ಅನಂತರ ಪ್ರತ್ಯೇಕವಾಗಿ ತೆರಳಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ನಗರದಲ್ಲಿ ವಾಸ್ತವ್ಯ:
ಮಾ. ೨ರಂದು ಸಿಡಿ ಬಿಡುಗಡೆ ಬಳಿಕ ಮಾ. ೭ರ ವರೆಗೆ ನಗರದಲ್ಲಿ ವಾಸ್ತವ್ಯ ಹೂಡಿದ್ದರು. ಬಂಧನ ಭೀತಿಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. ಆರೋಪಿಗಳ ಜತೆ ನಿಕಟ ಸಂಪರ್ಕದಲ್ಲಿದ್ದವರು, ಸ್ನೇಹಿತರು, ಸಂಬಂಧಿಕರು ಸೇರಿ ಹಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ನಂಬರ್ ಹೆಸರು ನಕಲಿ:
ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ತಾವು ತಂಗುವ ಹೊಟೇಲ್, ಲಾಡ್ಜ್‌ಗಳು, ರೆಸಾರ್ಟ್‌ಗಳ ನೋಂದಣಿ ಪುಸ್ತಕದಲ್ಲಿ ಅಪರಿಚಿತರ ಹೆಸರು, ಮೊಬೈಲ್ ನಂಬರ್‌ಗಳನ್ನು ಉಲ್ಲೇಖೀಸಿದ್ದಾರೆ. ಆರೋಪಿಗಳ ಲೊಕೇಷನ್ ಸಂಗ್ರಹಿಸಿ ನಿಗದಿತ ಸ್ಥಳಕ್ಕೆ ಹೋಗುವ ಕೆಲ ಹೊತ್ತಿನಲ್ಲೇ ಸ್ಥಳದಲ್ಲಿ ಕಾಲ್ಕಿಳುತ್ತಿದ್ದಾರೆ. ಬಳಿಕ ಅಲ್ಲಿನ ಸಿಸಿ ಕೆಮರಾ ಶೋಧಿಸಿದಾಗ ಆರೋಪಿಗಳು ಓಡಾಡಿರುವ ದೃಶ್ಯಗಳು ಸೆರೆಯಾಗಿವೆ.