ಸಿಡಿ ಯುವತಿಯ ಹೇಳಿಕೆ ರದ್ದು ತಂದೆಯ ಮನವಿ ಎಸ್‌ಐಟಿಗೆ ನೋಟೀಸ್

ಬೆಂಗಳೂರು,ಏ.೫-ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ ೧೬೪ ರ ಅಡಿ ನಿಯಮಬಾಹಿರವಾಗಿ ತಮ್ಮ ಪುತ್ರಿಯ ಹೇಳಿಕೆ ದಾಖಲಿಸಿದ್ದಾರೆಂದು ಆಕ್ಷೇಪಿಸಿ ಯುವತಿಯ ತಂದೆ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆದು ಎಸ್‌ಐಟಿ, ಗೃಹ ಇಲಾಖೆಗೆ ನೋಟೀಸ್ ಜಾರಿಗೊಳಿಸಲಾಗಿದೆ.
ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಉಪಸ್ಥಿತಿಯಲ್ಲಿ ನಿಯಮಬಾಹಿರವಾಗಿ ಸಿಆರ್‌ಪಿಸಿ ಸೆಕ್ಷನ್ ೧೬೪ರ ಅಡಿ ನ್ಯಾಯಾಲಯದಲ್ಲಿ
ಹೇಳಿಕೆ ದಾಖಲಿಸಿದ ಆರೋಪ ಮಾಡಿರುವ ಯುವತಿಯ ತಂದೆಯು ಹೇಳಿಕೆ ರದ್ದು ಕೋರಿ ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದರು.
ಆದರೆ ರಿಟ್ ಅರ್ಜಿಯೊಂದಿಗೆ ಸಿಆರ್‌ಪಿಸಿ ಸೆ. ೧೬೪ ಹೇಳಿಕೆಯ ಪ್ರತಿ ಸಲ್ಲಿಸಿಲ್ಲವೆಂದು ಕಚೇರಿ ಆಕ್ಷೇಪಣೆ ಎತ್ತಿತ್ತು. ಸಿಆರ್‌ಪಿಸಿ ಸೆ. ೧೬೪ರಡಿ ಹೇಳಿಕೆ ಕೋರ್ಟ್ ನಲ್ಲಿದೆ. ಆರೋಪಪಟ್ಟಿ ಸಲ್ಲಿಕೆಯಾಗುವವರೆಗೆ ಹೇಳಿಕೆಯ ಪ್ರತಿ ಸಿಗುವುದಿಲ್ಲ. ಹೀಗಾಗಿ ಕಚೇರಿ ಆಕ್ಷೇಪಣೆಯಿಂದ ವಿನಾಯಿತಿ ನೀಡಲು ಯುವತಿಯ ತಂದೆ ಪರ ವಕೀಲರು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ ೧೬೪ರಡಿ ಹೇಳಿಕೆ ಹಾಜರುಪಡಿಸುವುದಕ್ಕೆ ತಾತ್ಕಾಲಿಕ ವಿನಾಯಿತಿ ನೀಡಿದ ಹೈಕೋರ್ಟ್ ಹೇಳಿಕೆ ರದ್ದು ಕೋರಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಎಸ್‌ಐಟಿ, ಗೃಹ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ನ್ಯಾ. ಅಶೋಕ್ ಜಿ. ನಿಜಗಣ್ಣವರ್ ಪೀಠ ಆದೇಶಿಸಿದೆ.