ಸಿಡಿ ಬಿಡುಗಡೆ ಬಳಿಕ ಭೀತಿಯಿಂದ ರಾಜ್ಯ ಬಿಟ್ಟಿದ್ದೆ – ಯುವತಿ ಹೇಳಿಕೆ

ಬೆಂಗಳೂರು,ಏ.5- ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧ ಮಗಳನ್ನು ಅಪಹರಿಸಿದ್ದಾರೆ ಎಂದು ಪೋಷಕರು ನೀಡಿದ ದೂರು ಹಿನ್ನೆಲೆ ಗುರುನಾನಕ್ ಭವನದ ವಿಶೇಷ ನ್ಯಾಯಾಲಯದ ಮುಂದೆ ಯುವತಿ ಹೇಳಿಕೆ ನೀಡಿದ್ದಾರೆ.
32ನೇ ಎಸಿಎಂಎಂ ನ್ಯಾಯಾಲಯದ‌ ನ್ಯಾಯಾಧೀಶರು ಯುವತಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.ಬಳಿಕ ಎಸ್ಐಟಿ ಆಡುಗೋಡಿ ಟೆಕ್ನಿಕಲ್‌ ಸೆಂಟರ್​ಗೆ ಕರೆದೊಯ್ದಿದ್ದಾರೆ.
ಅಪಹರಣ ಪ್ರಕರಣ ಸಂಬಂಧ ಪ್ರಕರಣದ ಪ್ರಾಥಮಿಕ ತನಿಖೆ ಮುಗಿಸಿರುವ ತನಿಖಾಧಿಕಾರಿ ಎಸಿಪಿ ನಾಗರಾಜ್ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಅನುಮತಿ ಪಡೆದಿದ್ದರು.
ಸಿಡಿ ಬಿಡುಗಡೆ ನಂತರ ಭೀತಿಗೊಳಗಾಗಿ ನಾನು ರಾಜ್ಯ ಬಿಟ್ಟಿದ್ದೆ. ನಾನು ಬೇರೆ ಕಡೆ ಸ್ಥಳಾಂತರವಾಗಲು ಕೆಲವರು ಸಹಾಯ ಮಾಡಿದ್ದಾರೆ.ತಾನು ಕಿಡ್ನ್ಯಾಪ್ ಆಗಿಲ್ಲ. ನನ್ನ ಪೋಷಕರು ಬೇರೆಯವರ ಒತ್ತಡದಿಂದ ಅಪಹರಣ ದೂರು ನೀಡಿದ್ದಾರೆ‌.
ಕಳೆದ ಮಾ.2ರಿಂದ ನಾನು ನಮ್ಮ ‌ಪೋಷಕರ ಸಂಪರ್ಕಕ್ಕೆ ಸಿಕ್ಕಿಲ್ಲ‌.ಕೇವಲ ಎರಡು ಬಾರಿ ಫೋನ್​ನಲ್ಲಿ ಪೋಷಕರ ಜತೆ ಮಾತನಾಡಿದೆ. ನಮ್ಮ ಪೋಷಕರಿಗೆ ಜೀವ ಭಯ ಇರುವುದರಿಂದ ರಾಜ್ಯ ಸರ್ಕಾರ ಭದ್ರತೆ ಒದಗಿಸಬೇಕು ಎಂದು ಮೊಬೈಲ್ ವಿಡಿಯೋ ಮಾಡಿದೆ’ ಎಂದು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.