ಸಿಡಿ ಬಿಟ್ಟರೆ ಕಾಂಗ್ರೆಸ್ಸಿಗೆ ಬೇರೆ ವಿಷಯವಿಲ್ಲ, ವರಿಷ್ಠರಿಂದಲೇ ನನ್ನ ಸ್ಪರ್ಧೆ ಬಗ್ಗೆ ನಿರ್ಧಾರ: ಬಿ.ವೈ. ವಿಜಯೇಂದ್ರ

ಕಲಬುರಗಿ.ಮಾ.24:ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲು ವಿರೋಧ ಪಕ್ಷವಾದ ಕಾಂಗ್ರೆಸ್ಸಿಗೆ ಯಾವುದೇ ವಿಷಯವಿಲ್ಲ. ಹೀಗಾಗಿ ಸಿಡಿ ಪ್ರಕರಣ ಹಿಡಿದುಕೊಂಡು ಕೂತಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೂ ಸಹ ನಾನು ಸ್ಪರ್ಧೆ ಮಾಡುತ್ತೇನೆ ಎಂದರು.
ಉಪ ಚುನಾವಣೆಯು ಬಿಜೆಪಿ ಪಕ್ಷಕ್ಕೆ ಒಂದು ರೀತಿಯಲ್ಲಿ ಸವಾಲಾಗಿದೆ. ಪಕ್ಷದ ಕಾರ್ಯಕರ್ತರು ಸವಾಲನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಹೀಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ್ ಮತ್ತು ಮಸ್ಕಿ ವಿಧಾನಸಭಾ ಮತಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವರುಣಾದಲ್ಲಿಯೇ ಬಿ.ವೈ. ವಿಜಯೇಂದ್ರ ಅವರು ಮನೆ ಮಾಡಿಕೊಂಡು ಪಕ್ಷದ ಬಲವರ್ಧನೆಗೆ ಮುಂದಾಗಲಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದು, ಅದರರ್ಥ ನಾನು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದಲ್ಲ. ಪಕ್ಷದ ವರಿಷ್ಠರು ರಾಜ್ಯದ ಯಾವುದೇ ಕ್ಷೇತ್ರದಲ್ಲಿಯೂ ನನಗೆ ಟಿಕೆಟ್ ಕೊಟ್ಟರೂ ಸಹ ನಾನು ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದರು.
ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿಯ ಸಂಘಟನೆಯನ್ನು ವೃದ್ಧಿಗೊಳಿಸಲು ಹೆಚ್ಚಿನ ಒತ್ತು ನೀಡಬೇಕಾಗಿದೆ. ಹಾಗಾಗಿ ಆ ಭಾಗದಲ್ಲಿ ಪಕ್ಷದ ಸಂಘಟನೆಯ ಕುರಿತು ನಾನು ಒಲುವು ಹೊಂದಿದ್ದೇನೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಸಿಡಿ ಪ್ರಕರಣವನ್ನು ಮುಂದೆ ಮಾಡಿ ವಿಧಾನಮಂಡಲದ ಕಲಾಪಗಳನ್ನು ಬಹಿಷ್ಕರಿಸುತ್ತಿರುವುದನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲು ಕಾಂಗ್ರೆಸ್ಸಿಗೆ ಯಾವುದೇ ವಿಷಯವಿಲ್ಲ. ಹಿಗಾಗಿ ಸಿಡಿ ಪ್ರಕರಣ ಹಿಡಿದುಕೊಂಡು ಕೂತಿದ್ದಾರೆ. ಕಾಂಗ್ರೆಸ್ಸಿನವರು ಮನಬಂದಂತೆ ಮಾತನಾಡುತ್ತಿರುವುದು ಯಾರಿಗೂ ಅರ್ಥವಾಗುತ್ತಿಲ್ಲ. ಸಿಡಿ ಕುರಿತು ವಿಶೇಷ ತನಿಖಾ ತಂಡವು ತನಿಖೆ ಆರಂಭಿಸಿದೆ. ಆರೋಪ ಬಂದ 24 ಗಂಟೆಯೊಳಗೆ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟಿದ್ದಾರೆ. ತನಿಖೆ ಮುಗಿಯುವವರೆಗೂ ಕಾಯಬೇಕು. ಅದನ್ನು ಬಿಟ್ಟು ಸದನದಲ್ಲಿ ಗದ್ದಲ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿನ ಶಾಸಕರೊಬ್ಬರ ರಾಸಲೀಲೆ ಪ್ರಕರಣವನ್ನು ತನಿಖೆ ಮಾಡುವ ಮೊದಲೇ ಮುಚ್ಚಿ ಹಾಕಲಾಯಿತು ಎಂದು ಮೇಟಿ ಪ್ರಕರಣದ ಕುರಿತು ಪರೋಕ್ಷವಾಗಿ ಟೀಕಿಸಿದ ಬಿ.ವೈ. ವಿಜಯೇಂದ್ರ ಅವರು, ರಾಜ್ಯ ಸರ್ಕಾರದ ನೈತಿಕತೆ ಕುರಿತು ಮಾತನಾಡುವ ನೈತಿಕತೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಕಿಡಿಕಾರಿದರು.
ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪದೇ ಪದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ವಿರುದ್ಧ ಹರಿಹಾಯುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಅವರ ವರ್ತನೆಯಿಂದ ಪಕ್ಷದ ಕಾರ್ಯಕರ್ತರಿಗೆ ನೋವಾಗುತ್ತಿದೆ. ಈ ರೀತಿ ಬೀದಿ ರಂಪಾಟ ಮಾಡುತ್ತಿರುವುದು ಸರಿಯಲ್ಲ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ ಸಹ ಪಕ್ಷಕ್ಕೆ ಮುಜುಗುರ ಆಗುವ ಘಟನೆಗಳು ನಡೆದಿದ್ದವು. ಈಗಲೂ ಸಹ ನಡೆದಿವೆ. ಪಕ್ಷದ ವರಿಷ್ಠರು ಇಂತಹುಗಳ ಕುರಿತು ಗಂಭೀರವಾಗಿದ್ದಾರೆ ಎಂದರು.
ಯತ್ನಾಳ್ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಸ್ವತ: ಪಕ್ಷದ ರಾಜ್ಯ ಉಸ್ತುವಾರಿ ಅರುಣಸಿಂಗ್ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆಯನ್ನು ಅವರೂ ತಳ್ಳಿ ಹಾಕಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಸಹ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ಕೇಂದ್ರ ನಾಯಕರೇ ಮೆಚ್ಚಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾದಳ ಪಕ್ಷಗಳು ಅಭ್ಯರ್ಥಿಯನ್ನು ಘೋಷಿಸಿವೆ ಎಂದು ಪತ್ರಕರ್ತರು ಹೇಳಿದಾಗ, ಬಿಜೆಪಿ ಅಭ್ಯರ್ಥಿಯ ಆಯ್ಕೆಯು ಸಹ ಎರಡು ದಿನಗಳಲ್ಲಿ ಆಗಲಿದೆ ಎಂದರು.