ಸಿಡಿ ಪ್ರಕರಣ ಬಂಧನ ಎಸ್‌ಐಟಿ ನಿರ್ಧಾರ; ಬೊಮ್ಮಾಯಿ

ಬೆಂಗಳೂರು,ಮಾ.೩೧- ಸಿಡಿ ಪ್ರಕರಣದ ಎಸ್‌ಐಟಿ ತನಿಖೆಯಲ್ಲಿ ಯಾರು ಮಧ್ಯ ಪ್ರವೇಶಿಸಲು ಅಧಿಕಾರವಿಲ್ಲ. ಅಪರಾಧ ದಂಡ ಸಂಹಿತೆಯಂತೆ ಎಸ್‌ಐಟಿ ಕೆಲಸ ಮಾಡುತ್ತಿದೆ. ಯಾರನ್ನು ಯಾವಾಗ ಬಂಧಿಸಬೇಕು. ಯಾರ ಬಂಧನ ಯಾವಾಗ ಎಲ್ಲವನ್ನೂ ಎಸ್‌ಐಟಿ ಅಧಿಕಾರಿಗಳೇ ತೀರ್ಮಾನಿಸುತ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಂಧನವನ್ನು ತಡೆಹಿಡಿಯಲು ಎಸ್‌ಐಟಿ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, ಎಸ್‌ಐಟಿಗೆ ಸಂಪೂರ್ಣ ಸ್ವಾತಂತ್ರ ಇದೆ. ತನಿಖೆಯಲ್ಲಿ ಯಾರು ಮಧ್ಯಪ್ರವೇಶಿಸಲು ಅವಕಾಶವಿಲ್ಲ. ಎಲ್ಲವನ್ನೂ ಎಸ್‌ಐಟಿಯೇ ತೀರ್ಮಾ ನಿಸುತ್ತದೆ ಎಂದು ಅರ್‌ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಎಸ್‌ಐಟಿ ತನ್ನ ಅವಶ್ಯಕತೆ ಅಗತ್ಯಗಳಿಗೆ ತಕ್ಕಂತೆ ಪ್ರಕರಣದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬಂಧನದ ಬಗ್ಗೆ ತೀರ್ಮಾನ ಮಾಡುತ್ತದೆ. ಯಾರನ್ನು ಬಂಧಿಸಬೇಕು ಬಿಡಬೇಕು ಎಂಬುದನ್ನು ಎಸ್‌ಐಟಿ ಅಧಿಕಾರಿಗಳೇ ತೀರ್ಮಾನಿಸುತ್ತಾರೆ ಎಂದರು.
ಎಸ್‌ಐಟಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರಕೊಡಲಿದೆ. ಕಾನೂನಿನಡಿಯಲ್ಲಿ ಎಸ್‌ಐಟಿ ಅಧಿಕಾರಿಗಳು ಕ್ರಮಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಲ್ಲ ವಿಷಯದ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತೀರ್ಮಾನಕೈಗೊಳ್ಳುವ ಮುಕ್ತ ಅಧಿಕಾರ ಹೊಂದಿದ್ದಾರೆ. ಎಸ್‌ಐಟಿ ಯಾರ ಪರವೂ ಇಲ್ಲ, ವಿರೋಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು.ಈ ಪ್ರಕರಣದಲ್ಲಿ ಗೃಹ ಸಚಿವರು ಕಾನೂನು ಸಚಿವರು ಎಂಬ ಪ್ರಶ್ನೆಯೇ ಬರುವುದಿಲ್ಲ. ಸತ್ಯ ಸಂಗತಿ ಹೊರ ತರಲು ಎಸ್‌ಐಟಿಯಿಂದ ಮಾತ್ರ ಸಾಧ್ಯ ಎಂದರು.
ಎಸ್‌ಐಟಿ ಯಾವ ಟ್ವೀಟ್, ಹೇಳಿಕೆಗಳು ಆಡಿಯೋಗಳು, ಪ್ರತಿಭಟನೆ, ಒತ್ತಡ, ಪ್ರಭಾವಗಳಿಗೆ ಮಣಿಯುವುದಿಲ್ಲ. ಯಾವುದೇ ಅಡೆತಡೆಗಳಿಗೆ ಮಣೆ ಹಾಕುವುದಿಲ್ಲ. ಕಾನೂನು ಪ್ರಕಾರವೇ ಕೆಲಸ ಮಾಡುತ್ತಿದೆ ಎಂದರು. ಸತ್ಯ ಸಂಗತಿ ಗೊತ್ತಾಗಬೇಕು ಅಷ್ಟೇ. ಆ ದಿಕ್ಕಿನಲ್ಲಿ ಎಸ್‌ಐಟಿ ಕೆಲಸ ಮಾಡುತ್ತಿದೆ ಎಂದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲವನ್ನು ಲಾ ಆಫ್ ಕೋರ್ಟ್‌ನಲ್ಲೂ ಸಾಬೀತು ಪಡಿಸಬೇಕಾಗುತ್ತದೆ. ಹಾಗಾಗಿ ಕಾನೂನುಬದ್ಧವಾಗಿಯೇ ಎಸ್‌ಐಟಿ ತನಿಖೆ ನಡೆದಿದೆ ಎಂದರು.
ಕಾಂಗ್ರೆಸ್‌ಗೆ ನೈತಿಕತೆ ಇಲ್ಲ
ಎಸ್‌ಐಟಿ ತನಿಖೆ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರಿಗೆ ಯಾವ ನೈತಿಕ ವಿಚಾರವಿದೆ. ಎಸ್.ವೈ ಮೇಟಿ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದರಾ, ವಿಚಾರಣೆ ಮಾಡಿದ್ದರಾ ಯಾರನ್ನೂ ವಿಚಾರಣೆ ಮಾಡಲಿಲ್ಲ. ಸಿಡಿ ಮಾಡಿದವರನ್ನೂ ಕಂಡು ಹಿಡಿಯಲಿಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಕಾಂಗ್ರೆಸ್‌ನವರು ಏನು ಮಾಡಿದ್ದರೂ ಎಂಬುದನ್ನು ನೋಡಬೇಕು ಎಂದು ತಿರುಗೇಟು ನೀಡಿದರು.