ಸಿಡಿ ಪ್ರಕರಣ ದುರುದ್ದೇಶ: ಸಿಎಂ

ಬೆಳಗಾವಿ,ಮಾ.೩೦- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ದುರುದ್ದೇಶ ಪೂರ್ವಕ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಪ್ರಕರಣದ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ತನಿಖೆ ನಡೆದಿದೆ ಎಂದಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಂಗಲ ಸುರೇಶ್ ಅಂಗಡಿ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖುದ್ದು ಆಸಕ್ತಿವಹಿಸಿ ನಿಷ್ಪಕ್ಷಪಾತವಾದ ತನಿಖೆ ಮಾಡಿಸುತ್ತಿದ್ದಾರೆ ಎಂದರು.
ರಮೇಶ್ ಜಾರಕಿಹೊಳಿ ಅವರ ಮೇಲೆ ಅನಗತ್ಯವಾದ ಆರೋಪ ಮಾಡುತ್ತಿರುವುದು ಸರ್ವರಿಗೂ ವೇದ್ಯವಾಗಿದೆ.. ಈ ಪ್ರಕರಣ ದುರುದ್ದೇಶ ಪೂರ್ವಕ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಕಾನೂನು ಚೌಕಟ್ಟಿನಲ್ಲಿ ಎಲ್ಲವನ್ನೂ ಎದುರಿಸಲಾಗುವುದು ಎಂದು ಅವರು ಹೇಳಿದರು.
ಮನವಿ
ಉಪ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ರಮೇಶ್ ಜಾರಕಿಹೊಳಿ ಅವರಿಗೆ ವಿನಂತಿ ಮಾಡಿದ್ದೇನೆ. ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ದೂರ ಉಳಿದ ಜಾರಕಿಹೊಳಿ
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಹಾಜರಿರುತ್ತಾರೆ ಎಂದು ಹೇಳಲಾಗಿತ್ತಾದರೂ ಅದು ಏಕೋ ಏನೋ ರಮೇಶ್ ಜಾರಕಿಹೋಲಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಗೈರು ಹಾಜರಾಗಿ ಅಂತರ ಕಾಯ್ದುಕೊಂಡರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಳಗಾವಿಗೆ ಆಗಮಿಸಿದ ಸಂದರ್ಭದಲ್ಲೂ ಅವರ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ಜಾರಕಹೊಳಿ ಬಂದಿರಲಿಲ್ಲ.
ಸಿಡಿ ಪ್ರಕರಣದಿಂದ ಬೇಸತ್ತಿರುವ ಜಾರಕಿಹೊಳಿ ಅವರು ಗೋಕಾಕ್‌ನಲ್ಲೇ ಇದ್ದರೂ ಮುಖ್ಯಮಂತ್ರಿಗಳ ಭೇಟಿಗಾಗಲಿ, ನಾಮಪತ್ರ ಸಲ್ಲಿಕೆಗಾಗಲಿ ಬಾರದಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.