ಸಿಡಿ ಪ್ರಕರಣ ತನಿಖೆ ಹಸ್ತಕ್ಷೇಪವಿಲ್ಲ

ಬೆಂಗಳೂರು, ಮೇ ೨೮- ಸಿಡಿ ಪ್ರಕರಣದ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪವನ್ನಾಗಲಿ, ಪ್ರಭಾವವನ್ನಾಗಲಿ ಬೀರಿಲ್ಲ ಎಂದು ಗೃಹ ಸಚಿವ ಬಸವರಾಜಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸಿಡಿ ಪ್ರಕರಣದ ತನಿಖೆಯನ್ನು ಪೊಲೀಸರು ಮುಕ್ತವಾಗಿ ನಡೆಸಿದ್ದಾರೆ. ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ನಡೆಸಿಲ್ಲ ಆದರೂ ಕಾಂಗ್ರೆಸ್‌ನ ನಾಯಕರುಗಳು ದುರುದ್ದೇಸದಿಂದ ತನಿಖೆಯ ಮೇಲೆ ಪ್ರಭಾವ ಬೀರಲು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಸಲ್ಲಿಸಲಿದ್ದಾರೆ. ನ್ಯಾಯಾಲಯದ ಅಡಿಯಲ್ಲಿಯೇ ತನಿಖೆ ನಡೆದಿದೆ. ಹೀಗಿರುವಾಗ ಕಾಂಗ್ರೆಸ್ ನಾಯಕರ ಆರೋಪದಲ್ಲಿ ಹುರುಳಿಲ್ಲ ಎಂದರು. ಮಾಜಿ ಸಚಿವ ಮೇಟಿ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯೇ ದೂರು ನೀಡಿದ್ದರೂ ಮೇಟಿ ವಿರುದ್ಧ ಎಫ್‌ಐಆರ್ ದಾಖಲಿಸಲಿಲ್ಲ. ತನಿಖೆ ನಡೆಸಲಿಲ್ಲ. ಆಗ ಮುಖ್ಯಮಂತ್ರಿಯಾಗಿದ್ದರು ಸಿದ್ಧರಾಮಯ್ಯ, ಇಂತಹವರಿಂದ ನಾವು ನೈತಿಕ ಪಾಠ ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಹರಿಹಾಯ್ದರು.
ಸಿಡಿ ಪ್ರಕರಣದ ತನಿಖೆ ಬಗ್ಗೆ ಸಿಸಿಬಿ ಪೊಲೀಸರು ತನಿಖಾ ವರದಿಯನ್ನು ಸಲ್ಲಿಸಲು ತಯಾರಿ ನಡೆಸಿರುವ ಈ ಸಂದರ್ಭದಲ್ಲಿ ತನಿಖೆ ಮೇಲೆ ಪ್ರಭಾವ ಬೀರಲು ಈ ರೀತಿಯ ಇಲ್ಲಸಲ್ಲದ ಆರೋಪಗಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಅಭಿನಂದನೆ ಆರು ಮಂದಿ ಬಂಧನ
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಹೆಂಗಸರೂ ಸೇರಿದಂತೆ ೬ ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣ ತನಿಖೆ ನಡೆದಿದೆ. ಸಂಪೂರ್ಣ ತನಿಖೆಯ ನಂತರ ಎಲ್ಲವೂ ಗೊತ್ತಾಗಲಿದೆ ಎಂದರು.
ಈ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಡಿಯೋ ಉತ್ತರ ಭಾರತ ಸೇರಿದಂತೆ ಈಶಾನ್ಯ ರಾಜ್ಯಗಳ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಕೇಂದ್ರ ಸಚಿವ ಕಿರಣ್ ರಿರೂಜು ಈ ಬಗ್ಗೆ ಗಮನಹರಿಸಿ ಈ ಪ್ರಕರಣ ಎಲ್ಲಿ ನಡೆದಿದೆ ಎಂಬುದನ್ನು ಪತ್ತೆಹಚ್ಚಿ ಎಂದು ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದ್ದರು. ಆ ವಿಡಿಯೋ ಜಾಡು ಹಿಡಿದು ಬೆಂಗಳೂರು ಪೊಲೀಸರು ೨ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಎಲ್ಲಿ ನಡೆದಿತ್ತು ಎಂಬುದ ಗೊತ್ತಿಲ್ಲ. ವಿಡಿಯೋ ಅಪ್ ಲೋಡ್ ಮಾಡಿದ ಲೋಕೇಷನ್ ಆಧರಿಸಿ ಬೆಂಗಳೂರು ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ ಎಂದರು.
ಅವರ ಹೇಳಿಕೆಗೆ ಅವರೇ ಬದ್ಧ
ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಮ್ಮ ಇಲಾಖೆಯಲ್ಲೂ ಅವರ ಹಸ್ತಕ್ಷೇಪ ಇದೆ ಎಂದು ಸಚಿವ ಯೋಗೇಶ್ವರ್ ದೂರಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಬೊಮ್ಮಾಯಿ, ಎಲ್ಲರ ಹೇಳಿಕೆಗೂ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ಅವರವರ ಹೇಳಿಕೆಗೆ ಅವರೇ ಬದ್ಧ ಎಂದರು.
ಕಟ್ಟುನಿಟ್ಟಿನ ಸೂಚನೆ
ಲಾಕ್‌ಡೌನ್ ಸಂದರ್ಭದಲ್ಲಿ ಜನ ಮತ್ತು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.