ಸಿಡಿ ಪ್ರಕರಣದ ತನಿಖೆ ಸಿಬಿಐಗೆ; ರಾಜ್ಯ ಸರ್ಕಾರ ಎಸ್ಐಟಿಗೆ ಹೈಕೋರ್ಟ್ ನೋಟೀಸ್

ಬೆಂಗಳೂರು,ಏ.5-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ, ಗೃಹ ಇಲಾಖೆ ಹಾಗೂ ವಿಶೇಷ ತನಿಖಾ‌ ತಂಡ (ಎಸ್ಐಟಿ)ಗೆ ನೋಟಿಸ್ ಜಾರಿ ಮಾಡಿದೆ.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ವಕೀಲ ಎಸ್ ಉಮೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರ, ಎಸ್ಐಟಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಏಪ್ರಿಲ್ 17ಕ್ಕೆ ಮುಂದೂಡಿತು.
ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ನಿರ್ದೇಶಿಸಿತು.
ಅರ್ಜಿದಾರರ ಕೋರಿಕೆ:
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹಾದಿ ತಪ್ಪುತ್ತಿದೆ. ಇದೇ ವಿಚಾರವಾಗಿ ಸದನದಲ್ಲೂ ಚರ್ಚೆ ಮಾಡಿ ಅಮೂಲ್ಯ ಸಮಯ ವ್ಯರ್ಥ ಮಾಡಲಾಗಿದೆ. ಆಡಳಿತ ಮತ್ತು ಪ್ರತಿಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ರಾಜ್ಯ ಸರ್ಕಾರದ ಆಡಳಿತ ಯಂತ್ರವೂ ದುರ್ಬಲಕೊಂಡಿದೆ.
ಈ ಪ್ರಕರಣ ರಾಜಕೀಯ ಆಯಾಮ ಪಡೆದುಕೊಂಡಿರುವುದರಿಂದ ಎಸ್‌ಐಟಿ ಹಾಗೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಕೂಡ ಸೂಕ್ತ ತನಿಖೆ ನಡೆಸುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಸಮರ್ಪಕ ತನಿಖೆ ನಡೆಸಲು ಮತ್ತು ತಪ್ಪಿತಸ್ಥರನ್ನು ಗುರುತಿಸಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವೇ, ಪ್ರಕರಣದ ತನಿಖೆಗೆಂದೇ ವಿಶೇಷ ತನಿಖಾ ತಂಡ ರಚಿಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು.
ತನಿಖೆಯನ್ನು ಹೈಕೋರ್ಟ್ ಮೇಲ್ವಿಚಾರಣೆ ಮಾಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರತಿದಿನ ತಮ್ಮ ಇಚ್ಛಾನುಸಾರ ಸುದ್ದಿ ಪ್ರಸಾರ ಮಾಡುತ್ತಿದ್ದು, ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಹೀಗಾಗಿ, ಸಿಡಿ ಪ್ರಕರಣದ ಸಂಬಂಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೂ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.