ಸಿಡಿ ಪ್ರಕರಣಗಳಿಂದ ಕಾನೂನು, ಸುವ್ಯವಸ್ಥೆಗೆ ಧಕ್ಕೆ: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕಾಂಗ್ರೆಸ್ ಆಗ್ರಹ

ಕಲಬುರಗಿ:ಮಾ.29:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಯುವತಿಯೊಂದಿಗಿನ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವು ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ. ರಾಜ್ಯ ಸರ್ಕಾರವು ಇಡೀ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದೆ. ಇನ್ನೂ ಆರು ಜನ ಸಚಿವರು ತಮ್ಮ ಸಿಡಿ ಪ್ರದರ್ಶನಕ್ಕೆ ನ್ಯಾಯಾಲಯದ ಮೂಲಕ ತಡೆ ತಂದಿದ್ದಾರೆ. ಈ ಎಲ್ಲ ಘಟನೆಗಳಿಂದಾಗಿ ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕುಸಿದುಹೋಗಿದ್ದು, ಕೂಡಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಮಾಜಿ ಸಚಿವ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರ ಡಾ. ಶರಣಪ್ರಕಾಶ್ ಪಾಟೀಲ್ ಅವರು ಇಲ್ಲಿ ಒತ್ತಾಯಿಸಿದರು.
ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣಗಳಿಂದಾಗಿ ರಾಜ್ಯ ಸರ್ಕಾರವು ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕು ಇಲ್ಲ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವು ಇಡೀ ದೇಶವೇ ತಲೆ ತಗ್ಗಿಸುವಂತಹುದುಆಗಿದೆ. ರಾಜಕಾರಣಿಗಳ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಅಧಿಕಾರದ ದುರ್ಬಳಕೆಯಿಂದ ಯುವತಿಯ ಮೇಲೆ ಅತ್ಯಾಚಾರ ಆಗಿದೆ ಎಂದು ಸ್ವತ: ಸಂತ್ರಸ್ತ ಯುವತಿ ದೂರು ಕೊಟ್ಟರೂ ಸಹ ರಾಜ್ಯ ಸರ್ಕಾರವು ರಮೇಶ್ ಜಾರಕಿಹೊಳಿ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.
ಸಂತ್ರಸ್ತೆ ಯುವತಿ ಐದು ಸಿಡಿಗಳ ಮೂಲಕ ತನಗೆ ಅನ್ಯಾಯ ಹಾಗೂ ಅತ್ಯಾಚಾರ ಆಗಿರುವ ಕುರಿತು ಬಹಿರಂಗಪಡಿಸಿದ್ದಾಳೆ. ರಾಜ್ಯ ಸರ್ಕಾರದ ವಿಶೇಷ ತನಿಖಾ ದಳದ ತನಿಖೆಗೆ ಆಕೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನೇರವಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವುದಾಗಿಯೂ ತಿಳಿಸಿದ್ದಾಳೆ. ಆದಾಗ್ಯೂ, ಮಾನಮರ್ಯಾದೆ ಎಲ್ಲವನ್ನೂ ರಾಜ್ಯ ಸರ್ಕಾರವು ಗಾಳಿಗೆ ತೂರಿ ರಮೇಶ್ ಜಾರಕಿಹೊಳಿ ರಕ್ಷಣೆಗೆ ಮಾನಗೇಡಿ ಸರ್ಕಾರ ನಿಂತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಯು ನಾಚಿಕೆಗೇಡಿತನದ ಸಂಗತಿಯಾಗಿದೆ. ಕೂಡಲೇ ಆರೋಪಿ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಧು ಅವರು ಒತ್ತಾಯಿಸಿದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ 371(ಸಿ) ಪ್ರಕರಣ ದಾಖಲಾಗಿದೆ. ಆದಾಗ್ಯೂ, ಇದೇ ರೀತಿಯ ಪ್ರಕರಣ ಬೇರೆಯವರ ಮೇಲೆ ದಾಖಲಾದರೆ ಸುಮ್ಮನೇ ಬಿಡುತ್ತಿದ್ದರೆ? ಎಂದು ಖಾರವಾಗಿ ಪ್ರಶ್ನಿಸಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸಿಡಿ ಪ್ರಕರಣದ ಹಿಂದೆ ರಾಜಕೀಯ ಶಡ್ಯಂತ್ರ ಇದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಸುಖಾಸುಮ್ಮನೇ ಆರೋಪ ಮಾಡಿದ್ದಾರೆ. ಇಡೀ ಪ್ರಕರಣವನ್ನು ಡಿ.ಕೆ. ಶಿವಕುಮಾರ್ ಅವರತ್ತ ತಿರುಗಿಸೋಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವು ಬಿಜೆಪಿಯ ಕೈಗೊಂಬೆ ಆಗಬಾರದು. ವಿಶೇಷ ತನಿಖಾದಳದ ನಡುವಳಿಕೆ ನೋಡಿದರೆ ಹಾಗೆಯೇ ಅನ್ನಿಸುತ್ತದೆ. ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ತಮ್ಮ ಬಾಲಚಂದ್ರ ಜಾರಕಿಹೊಳಿ ಅವರು ಸಿಡಿ ಪ್ರಕರಣವನ್ನು ಹನಿ ಟ್ರ್ಯಾಪ್ ಎಂದು ಹೇಳುತ್ತಾರೆ. ರಮೇಶ್ ಜಾರಕಿಹೊಳಿ ಇದು ನನ್ನ ಸಿಡಿ ಅಲ್ಲಾ ಎನ್ನುತ್ತಾರೆ. ಈ ಕುರಿತು ಸಂತ್ರಸ್ತೆ ಯುವತಿ ಸ್ವತ: ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ಕೊಟ್ಟಿದ್ದಾಳೆ. ಜೊತೆಗೆ ಸಂತ್ರಸ್ತ ಯುವತಿಯ ಕು8ಟುಂಬಸ್ಥರನ್ನೂ ಈಗ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಿಡಿ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿ ಅವರು ಮಾಧ್ಯಮಗಳಖ ಮುಂದೆ ಸರ್ಕಾರವೇ ಬೀಳಿಸಿದ್ದೇವೆ. ಈ ಪ್ರಕರಣ ಏನ್ ಮಹಾ ಎಂದು ವ್ಯಂಗ್ಯವಾಡಿದ್ದಾರೆ. ಹಾಗಾಗಿ ಕಾನೂನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಮಾಜಿ ಸಚಿವ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗುತ್ತಾರೆ. ಸಂತ್ರಸ್ತ ಯುವತಿ ವಿಶೇಷ ತನಿಖಾ ತಂಡದ ಮುಂದೆ ಬರುವುದಕ್ಕೆ ಜೀವ ಭಯ ಇದೆ ಎಂದು ಹೇಳುತ್ತಿದ್ದಾರೆ. ಆರು ಜನ ಸಚಿವರು ಮಾನ, ಮರ್ಯಾದೆ ಬಿಟ್ಟು ನಮ್ಮ ಸಿಡಿಗಳನ್ನು ಬಿಡುಗಡೆ ಮಾಡಬೇಡಿ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದೆಲ್ಲವನ್ನೂ ನೋಡಿದರೆ ನಾವು ಖಾದಿ ಬಟ್ಟೆಗಳನ್ನು ಸಹ ಹಾಕುವುದಕ್ಕೆ ನಾಚಿಕೆ ಆಗುತ್ತಿದೆ ಎಂದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಬಳಕಾಯಿ ಕಳ್ಳಾ ಎಂದರೆ ಹೆಗಲು ಮುಟ್ಟಿಕೊಂಡು ನೋಡು ಎಂದ್ರಂತೆ. ಕೂಡಲೇ ಸಿಡಿ ಬಿಡುಗಡೆ ಮಾಡಬಾರದು ಎಂದು ನ್ಯಾಯಾಲಯದ ಮೊರೆ ಹೋದ ಆರು ಜನ ಸಚಿವರು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಇದು ಅತ್ಯಂತ ಕೆಟ್ಟ ಸರ್ಕಾರ. ಈ ಸರ್ಕಾರದ ಮೇಲೆ ವಿಶ್ವಾಸ ಇಲ್ಲ. ಇದು ನಾಚಿಕೆಗೆಟ್ಟ ಸರ್ಕಾರವಾಗಿದೆ. ಜನರ ವಿಶ್ವಾಸವನ್ನೂ ಕಳೆದುಕೊಂಡಿದೆ. ನ್ಯಾಯಾಂಗದ ಮೇಲೆ ನಮಗೆ ನಂಬಿಕೆ ಇದೆ. ಸರ್ಕಾರದ ಮೇಲೆ ನಂಬಿಕೆ ಇದೆ. ಆದಾಗ್ಯೂ, ವಿಶೇಷ ತನಿಖಾ ದಳಕ್ಕೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರ ಕೊಟ್ಟಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಿಶೇಷ ತನಿಖಾ ತಂಡಕ್ಕೆ 22 ಜನರನ್ನು ನೇಮಕ ಮಾಡಿದ್ದು ಬಿಟ್ಟರೆ ಇಲ್ಲಿಯವರೆಗೂ ಯುವತಿಯನ್ನು ಸಹ ಹುಡುಕುವುದಕ್ಕೆ ಆಗಿಲ್ಲ. ವಿಶೇಷ ತನಿಖಾ ತಂಡದಲ್ಲಿ ತನಿಖೆ ನಡೆಯುತ್ತಿರುವ ಕುರಿತು ಆಯ್ದ ಸಂಗತಿಗಳೂ ಮಾತ್ರ ಮಾಧ್ಯಮದಲ್ಲಿ ಬರುತ್ತಿವೆ. ಸಿಡಿ ರಶಿಯಾ ಸರ್ವರ್‍ನಲ್ಲಿ ಬಿಡುಗಡೆಯಾಗಿದೆ ಎಂದು ಹೇಳಿದ್ದು ಬಿಜೆಪಿಯವರು. 9 ಕೋಟಿ ರೂ.ಗಳನ್ನು ಬಳಕೆ ಮಾಡಿರುವುದಾಗಿ ಹೇಳಿರುವುದೂ ಸಹ ಬಿಜೆಪಿಯವರು. ಈ ಸರ್ಕಾರವನ್ನು ಕೆಡುವುದಕ್ಕೆ, ಅಸ್ಥಿರಗೊಳಿಸುವುದಕ್ಕೆ ಯಾರು ಮುಂದಾಗಿರೋದು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಸಿಡಿ ಪ್ರಕರಣದ ಕುರಿತು ಕಾಂಗ್ರೆಸ್ ಪಕ್ಷದ ಆರೋಪಗಳಿಗಿಂತಲೂ ಬಿಜೆಪಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳುತ್ತಿದ್ದಾರೆ. ವಿಶೇಷ ತನಿಖಾ ದಳದಲ್ಲಿ ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದು ಹೆಚ್ಚಾಗಿದೆ. ಈ ಸರ್ಕಾರದಲ್ಲಿ ಅಭಿವೃದ್ಧಿಗಾಗಿ ಅನುದಾನ ಕೇಳಬೇಕಾದರೂ ಲಂಚ ಕೊಡಬೇಕು. ಕೆಲಸ ಏನಾದರೂ ಕೊಡಬೇಕು ಎಂದರೆ ಮಂಚ ಹತ್ತಬೇಕು. ಇದೇನು ಲಂಚದ ಸರ್ಕಾರವೇ ಇಲ್ಲವೇ ಮಂಚದ ಸರ್ಕಾರವೇ? ಎಂದು ಅವರು ವ್ಯಂಗ್ಯವಾಡಿದರು.
ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಮ್ಕಿಶ್ರ ಸರ್ಕಾರವನ್ನು ಬೀಳಿಸಲು ಮುಂಬಯಿಯಲ್ಲಿ ಹೋಗಿದ್ದ ಸಂದರ್ಭದಲ್ಲಿ ಏನೇನು ನಡೆದಿದೆ? ಮುಂಬಯಿನಲ್ಲಿ ನಾವು ಇಟ್ಟಿರೋದಾ ಏನು ಅವರು ಇಟ್ಟಿರೋದಾ? ಎಂದು ಕೇಳಿದ ಅವರು, ಕೂಡಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನಿಜ್ ಫಾತಿಮಾ ಬೇಗಂ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಅಲ್ಲಮಪ್ರಭು ಪಾಟೀಲ್ ನೆಲೋಗಿ, ಮಾಜಿ ಮೇಯರ್ ಶರಣಕುಮಾರ್ ಮೋದಿ ಮುಂತಾದವರು ಉಪಸ್ಥಿತರಿದ್ದರು.