ಸಿಡಿ ಆರೋಪ ನ್ಯಾಯಾಂಗ ತನಿಖೆಗೆ ಡಿಕೆಶಿ ಆಗ್ರಹ

ಬೆಂಗಳೂರು, ಜ 14- ಬಿಜೆಪಿ ನಾಯಕರು ಮಾಡಿರುವ ಸಿ.ಡಿ. ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಕ್ವೀನ್ಸ್ ರಸ್ತಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ತೋರಿಸಿ ಬ್ಲಾಕ್ ಮೇಲ್ ಮಾಡಿ ಮತ್ತು ಲಂಚ ನೀಡಿದವರಿಗೆ ಮಾತ್ರ ಸ್ಥಾನ ನೀಡಲಾಗಿದೆ ಎಂಬುದಾಗಿ ಬಿಜೆಪಿ ಶಾಸಕರು ಮಾಡಿರುವ ಗಂಭೀರ ಆರೋಪಗಳ ಬಗ್ಗೆ ಹೈಕೋರ್ಟಿನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಯಾವ ರೀತಿಯ ಸಿಡಿ ತೋರಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಹೆದರಿಸಲಾಗಿದೆ, ಸಿಡಿಯಲ್ಲಿ ಅಂತಹ ವಿಚಾರ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಭಾರತೀಯ ದಂಡ ಸಂಹಿತೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ವ್ಯಾಪ್ತಿಗೆ ಬರುವ ವಿಚಾರಗಳ ಬಗ್ಗೆ ಆಡಳಿತ ಪಕ್ಷದ ಮುಖಂಡರೇ ಆರೋಪ ಮಾಡಿದ್ದು , ಲೋಕಾಯುಕ್ತ, ಜಾರಿ ನಿರ್ದೇಶನಾಲಯ ಸೇರಿದಂತೆ ಇತರ ತನಿಖಾ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ತನಿಖೆ ನಡೆಸಬೇಕು.‌ಆರೋಪ ಮಾಡಿರುವವರ ಬಳಿಯಿರುವ ಸಾಕ್ಷಿಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಇನ್ನೂ ಏಳು ಜನ್ಮ ಎತ್ತಿ ಬಂದರೂ ದೇಶದಿಂದ ಕಾಂಗ್ರೆಸ್‌ ಪಕ್ಷವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಸಿಎಂಗೆ ಅವರು ತಿರುಗೇಟು ನೀಡಿದರು.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಈ ತಿಂಗಳ 20 ರಂದು ರಾಜಭವನಕ್ಜೆ ಮುತ್ತಿಗೆ ಹಾಕಲಾಗುವುದು ಎಂದ ಅವರು, ಫ್ರೀಡಂ ಪಾರ್ಕ್ ನಿಂದ ರ್ಯಾಲಿ ನಡೆಸಲಾಗುವುದು ಎಂದು ತಿಳಿಸಿದರು.