ಸಿಡಿಲು ಮಳೆ: ಮನೆಗಳಿಗೆ ಹಾನಿ

ಭಟ್ಕಳ, ಮೇ ೨೦- ತಾಲೂಕಿನ ಬೇಂಗ್ರೆಯ ಚಿಟ್ಟಿಹಕ್ಲಿನಲ್ಲಿ ಮಂಗಳವಾರ ರಾತ್ರಿಯ ಭಾರೀ ಗುಡುಗು ಮಿಂಚು ಗಾಳಿ ಮಳೆಗೆ ಮೂರು ಮನೆಗೆ ಹಾನಿಯಾಗಿದ್ದು, ವಿದ್ಯುತ್ ಮೀಟರ್ ಸೇರಿದಂತೆ ಪರಿಕರಗಳು ಸುಟ್ಟು ಹೋದ ಘಟನೆ ನಡೆದಿದೆ.
ಚಿಟ್ಟಿಹಕ್ಲಿನ ಗಣಪತಿ ಜಟ್ಟಯ್ಯ ದೇವಡಿಗ ಅವರ ಮನೆಗೆ ಸಿಡಿಲು ಬಡಿದು ಮನೆ ಬಿರುಕು ಬಿಟ್ಟಿದ್ದು, ಮನೆಯಲ್ಲಿದ್ದ ಶಾರದಾ ಗಣಪತಿ ದೇವಡಿಗ ಅವರು ಅಸ್ವಸ್ಥಗೊಂಡು ಶಿರಾಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸಿಡಿಲಿಗೆ ವಿದ್ಯುತ್ ಪರಿಕರವೂ ಹಾನಿಯಾಗಿದೆ. ರಾಮ ನಾರಾಯಣ ದೇವಾಡಿಗರ ಮನೆಯೂ ಬಿರುಕು ಬಿಟ್ಟಿದ್ದು ಹಾನಿಯಾಗಿದೆ. ಸೋಮಯ್ಯ ಕೃಷ್ಣ ದೇವಾಡಿಗರ ಮನೆಯ ಮೇಲ್ಛಾವಣಿ ಗಾಳಿ ಮಳೆಗೆ ಹಾನಿಯಾಗಿದೆ. ಭಾರೀ ಗುಡುಗು ಸಿಡಿಲಿಗೆ ಚಿಟ್ಟಿಹಕ್ಲಿನ ಸುಮಾರು ೨೫ಕ್ಕೂ ಅಧಿಕ ಮನೆಗಳ ವಿದ್ಯುತ್ ಮೀಟರ್, ವಯರ್ ಮುಂತಾದವುಗಳಿಗೆ ಹಾನಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ತಾ.ಪಂ. ಸದಸ್ಯ ವಿಷ್ಣು ದೇವಾಡಿಗ ಮತ್ತಿತರು ಭೇಟಿ ನೀಡಿದ್ದು, ನೋಡಲ್ ಅಧಿಕಾರಿ ಬಸವರಾಜ ಬಳ್ಳಾರಿ, ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ ಸಹ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.