ಸಿಡಿಲು, ಮಳೆಯ ಮಾಹಿತಿಗಾಗಿ ಆಪ್ ಅಳವಡಿಸಿಕೊಳ್ಳಿ

ಹುಳಿಯಾರು, ನ. ೧೧- ಹೊಲದಲ್ಲಿರುವ ರೈತರು ಹಾಗೂ ಕುರಿಗಾಹಿಗಳು ಗುಡುಗು, ಮಿಂಚು, ಸಿಡಿಲು ಅಥವಾ ಮಳೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ, ಅಂಗೈನಲ್ಲೇ ಸಿಡಿಲಿನ ಮತ್ತು ಮಳೆಯ ಮುನ್ಸೂಚನೆ ಸಿಗಲಿದೆ. ಇದಕ್ಕಾಗಿ ಮಳೆ ಮನ್ಸೂಚನೆ ನೀಡುವ ಮೇಘಧೂತ ಹಾಗೂ ಸಿಡಿಲಿನ ಮುನ್ನೆಚ್ಚರಿಕೆ ನೀಡುವ ದಾಮಿನಿ ಆಪ್‌ಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಅಳವಡಿಸಿಕೊಳ್ಳುವಂತೆ ತಿಪಟೂರು ಕೃಷಿ ವಿಜ್ಞಾನ ಕೇಂದ್ರದ ತಜ್ಞರಾದ ಡಾ.ಪದ್ಮನಾಭನ್ ತಿಳಿಸಿದರು.
ಹುಳಿಯಾರು ಹೋಬಳಿ ಯಳನಾಡು ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ತಿಪಟೂರು ಕೃಷಿ ವಿಜ್ಞಾನ ಕೇಂದ್ರದ ಹಾಗೂ ಜಿಲ್ಲಾ ಕೃಷಿ ಹವಮಾನ ಘಟಕದ ವತಿಯಿಂದ ಏರ್ಪಡಿಸಿದ್ದ ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಕುರಿತ ಅರಿವು ಮೂಡಿಸುವ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹವಾಮಾನ ಬದಲಾವಣೆ ಪರಿಣಾಮ ರೋಗ ಮತ್ತು ಕೀಟ ಬಾಧೆಗೆ ಬೆಳೆ ತುತ್ತಾಗುತ್ತದೆ. ಇದರಿಂದ ಉತ್ಪಾದಕತೆ ಕುಂಠಿತವಾಗಲಿದೆ. ಬೀಜದ ಉತ್ಪತ್ತಿ ಹಾಗೂ ಅದರ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಮಳೆಯಾಧಾರಿತ ಕೃಷಿಯಲ್ಲಿ ಸರಿಯಾದ ಸಮಯದಲ್ಲಿ ಬಿತ್ತನೆ ಮಾಡುವ ಜತೆಗೆ ಕೃಷಿ ಚಟುವಟಿಕೆಗಳನ್ನು ಕಾಲಾನುಸಾರವಾಗಿ ಮಳೆಗೆ ಅನುಗುಣವಾಗಿ ಮಾಡುವ ಮೂಲಕ ಹೆಚ್ಚು ಇಳುವರಿ ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ಕೃಷಿ ಅಧಿಕಾರಿ ಬಾಲಚಂದ್ರ, ರೈತ ಸಂಘದ ಬಸವರಾಜು, ಪರಮೇಶ್, ಕೋರಗೆರೆರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.