ಸಿಡಿಲು ಬಡಿದು ೧೪ ಮಂದಿ ಸಾವು

ಕೊಲ್ಕತ್ತಾ, ಏ.೨೮- ಪಶ್ಚಿಮ ಬಂಗಾಳದ ಐದು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಕನಿಷ್ಠ ೧೪ ಮಂದಿ ಸಾವನ್ನಪ್ಪಿದ್ದಾರೆ. ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ೪ ಮಂದಿ, ಮುರ್ಷಿದಾಬಾದ್ ಹಾಗೂ ೨೪ ಪರಗಣ ಜಿಲ್ಲೆಯಲ್ಲಿ ತಲಾ ಇಬ್ಬರು, ಪಶ್ಚಿಮ ಮಿಡ್ನಾಪುರ ಹಾಗೂ ಹೌರಾ ಜಿಲ್ಲೆಯಲ್ಲಿ ತಲಾ ಮೂರು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಮೃತಪಟ್ಟವರಲ್ಲಿ ಬಹುತೇಕರು ರೈತರಾಗಿದ್ದು, ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಅಸುನೀಗಿದ್ದಾರೆ.ಇನ್ನೂ, ಕೋಲ್ಕತ್ತ, ಹೌರಾ, ಉತ್ತರ ೨೪ ಪರಗಣ, ಪೂರ್ವ ಬರ್ಧಮಾನ್ ಹಾಗೂ ಮುರ್ಷಿದಾಬಾದ್ ಮುಂದಾದ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸಿಡಿಲು ಹಾಗೂ ಗುಡುಗು ಸಹಿತ ಮಳೆಯಾಗಿದೆ.
ಅದು ಅಲ್ಲದೆ, ಈ ಭಾಗದಲ್ಲಿ ೭೯ ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯಿಂದ ಮಳೆ ಸಂಭವಿಸಿದೆ. ಅಲ್ಲದೆ ಗಾಳಿಯ ಈ ವೇಗ ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯದ್ದಾಗಿತ್ತು ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಅಧಿಕಾರಿ ತಿಳಿಸಿದ್ದಾರೆ.