
ಭುವನೇಶ್ವರ,ಸೆ.೪- ಒಡಿಶಾದಾದ್ಯಂತ ಸುಮಾರು ಎರಡು ಗಂಟೆಗಳ ಅವಧಿಯಲ್ಲಿ ಸುಮಾರು ೬೧ ಸಾವಿರಕ್ಕೂ ಹೆಚ್ಚು ಸಿಡಿಲು ಬಡಿದು ೧೨ ಜನರು ಸಾವನ್ನಪ್ಪಿದ್ದು ೧೪ ಜನರು ಗಾಯಗೊಂಡಿರುವ ಘಟನೆ ನಡೆದಿದೆ.ರಾಜ್ಯದಲ್ಲಿ ಸೆಪ್ಟಂಬರ್ ೭ ರ ತನಕ ಬಾರಿ ಮಳೆ ಮತ್ತು ಮಳೆ ಸಂಬಂಧಿತ ಅನಾಹುತದ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ವಿಶೇಷ ಪರಿಹಾರ ಆಯುಕ್ತ ಸತ್ಯಬ್ರತ ಸಾಹು ತಿಳಿಸಿದ್ದಾರೆ.ನಿನ್ನೆ ಸಿಡಿಲು ಬಡಿದು ಮೃತಪಟ್ಟವರಲ್ಲಿ ನಾಲ್ವರು ಖುರ್ದಾ ಜಿಲ್ಲೆಯವರು, ಇಬ್ಬರು ಬಲಂಗಿರ್‌ನವರು ಮತ್ತು ಅಂಗುಲ್, ಬೌಧ್, ಧೆಂಕನಲ್, ಗಜಪತಿ, ಜಗತ್‌ಸಿಂಗ್‌ಪುರ ಮತ್ತು ಪುರಿಯಿಂದ ತಲಾ ಒಬ್ಬರು ಎಂದು ತಿಳಿಸಿದ್ದಾರೆ
“ಇದಲ್ಲದೆ, ಗಜಪತಿ ಮತ್ತು ಕಂಧಮಾಲ್ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಎಂಟು ಜಾನುವಾರುಗಳು ಸಾವನ್ನಪ್ಪಿವೆ”. ಮೃತಪಟ್ಟ ಕುಟುಂಬಗಳಿಗೆ ತಲಾ ೪ ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಎಲ್ಲೋ ಅಲರ್ಟ್ :
ವಾರದ ನಂತರ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. “ಸೆಪ್ಟೆಂಬರ್ ೭ ರವರೆಗೆ ಹೆಚ್ಚಿನ ಜಿಲ್ಲೆಗಳಲ್ಲಿ ಭಾರೀ ಮಳೆಯ ಹಳದಿ ಎಚ್ಚರಿಕೆ ನೀಡಲಾಗಿದೆ” ಎಂದು ಹೇಳಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಸಕ್ರಿಯವಾಗಿರುವ ಚಂಡಮಾರುತ ಮುಂದಿನ ೪೮ ಗಂಟೆಗಳಲ್ಲಿ ಕಡಿಮೆ ಒತ್ತಡದ ಪ್ರದೇಶವಾಗಿ ತೀವ್ರಗೊಳ್ಳ ಬಹುದು ಮತ್ತು ಅದರ ಪ್ರಭಾವದಿಂದ ಒಡಿಶಾದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹಮಾಮಾನ ಇಲಾಖೆ ತಿಳಿಸಿದೆ.
ದೀರ್ಘ ವಿರಾಮದ ನಂತರ ಮುಂಗಾರು ಸಹಜ ಸ್ಥಿತಿಗೆ ಮರಳಿದ್ದು ಈ ಅಸಾಮಾನ್ಯ ಮತ್ತು ವಿಪರೀತ ಮಿಂಚಿನ ಚಟುವಟಿಕೆಗಳು ಸಂಭವಿಸುತ್ತವೆ ಎಂದು ಹವಾಮಾನ ವಿಜ್ಞಾನಿಗಳು ಹೇಳಿದೆ.