ಸಿಡಿಲು ಬಡಿದು ಹೊಟೇಲ್ ಬೆಂಕಿಗಾಹುತಿ

ರಾತ್ರಿ ನಡೆದ ಅವಘಡ: ತಪ್ಪಿದ ಭಾರೀ ಅನಾಹುತ
ಉಡುಪಿ, ಜ.೭- ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೋಟೆಲ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬ್ರಹ್ಮಾವರದ ಆಕಾಶವಾಣಿ ಸಮೀಪದ ಸಪ್ತಮಿ ಹೋಟೆಲ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಸಂಜೆ ವೇಳೆ ಕಾಣಿಸಿಕೊಂಡ ಗುಡುಗು ಮಿಂಚಿನ ಪರಿಣಾಮದಿಂದಾಗಿ ರಾತ್ರಿ ೮ರಿಂದ ೮.೩೦ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಅಡುಗೆ ಕೋಣೆಯಲ್ಲಿದ್ದ ವಸ್ತುಗಳು, ವಿದ್ಯುತ್ ಉಪಕರಣಗಳಾದ ಗ್ರೈಂಡರ್, ಪ್ರಿಡ್ಜ್, ಮಿಕ್ಸಿ ಇತ್ಯಾದಿಗಳು ಬೆಂಕಿಗಾಹುತಿಯಾಗಿದೆ. ಇನ್ನು ಕ್ಯಾಶ್ ಕೌಂಟರ್ ನಲ್ಲಿದ್ದ ಮೂವತ್ತು ಸಾವಿರ ರೂ. ನಗದು, ಆಧಾರ್ ಕಾರ್ಡ್, ಸೇರಿದಂತೆ ಕೆಲವು ದಾಖಲೆಗಳು ಬೆಂಕಿಗಾಹುತಿಯಾಗಿದೆ. ಇನ್ನು ಘಟನೆಯ ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಬೆಂಕಿ ಹರಡಿ ಸಂಭವಿಸಬಹುದಾದ ಹೆಚ್ಚಿನ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಮಾಲಕ ಸತೀಶ್ ಶೆಟ್ಟಿ ಎಂಬವರು ಕಳೆದ ಮೂರು ವರ್ಷಗಳಿಂದ ಈ ಹೋಟೇಲ್ ನಡೆಸುತ್ತಿದ್ದು, ಬುಧವಾರದಂದು ಹೋಟೇಲ್ ವ್ಯವಹಾರ ಮುಗಿಸಿ ಬಾಗಿಲು ಮುಚ್ಚಿ ತೆರಳಿದ ಬಳಿಕ ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.