ಸಿಡಿಲು ಬಡಿದು ಓರ್ವನ ಬಲಿ, 12 ಜನರಿಗೆ ಗಾಯ

ಚಿತ್ತಾಪೂರ:ಮೇ.25: ತಾಲ್ಲೂಕಿನ ಸುತ್ತಮುತ್ತಲು ನಿನ್ನೆ ಮುಸುಕಿದ ವಾತಾವರಣ ಮಳೆಯ ಮುನ್ಸೂಚನೆ ಇತ್ತು, ಸಾಯಂಕಾಲ ಗುಡುಗು ಮಿಂಚು ಆರಂಬಿಸಿತ್ತು ಇದೇ ಸಮಯದಲ್ಲಿ ಸಿಡಿಲಿನ ಬಡಿತಕ್ಕೆ ಓರ್ವ ಮೃತಟ್ಟರೆ ಇನ್ನೊಂದು ಕಡೆ ಸಿಡಿಲಿನ ಬಡಿತಕ್ಕೆ 12 ಜನರು ಗಾಯಗೊಂಡ ಘಟನೆ ದಿಗ್ಗಾಂವ ಗ್ರಾಮದ ರಸ್ತೆಯಲ್ಲಿ ಬುಧವಾರ ನಡೆದಿದೆ.

ದಿಗ್ಗಾಂವ ಗ್ರಾಮದ ಭೀಮಾಶಂಕರ ತಂದೆ ಸಾಬಣ್ಣ ನೀಲಹಳ್ಳಿ (25) ಮೃತ ದುರ್ದೈವಿ. ಈತ ಚಿತ್ತಾಪುರದಿಂದ ದಿಗ್ಗಾಂವ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಮಳೆಯಿಂದ ತಪ್ಪಿಸಿಕೊಳ್ಳಲು ಗಿಡದ ಕೆಳಗೆ ನಿಂತಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ವಿಜಯ ಪ್ರಕಾಶ (33), ಆನಂದ ಕೃಷ್ಣಯ್ಯ ರಾವೂರಕರ್ (30), ಮಾರುತಿ ಸಾಬಣ್ಣ ಚಿತ್ತಾಪುರ (30), ರಾಘವೇಂದ್ರ ಲಾಲಯ್ಯ ದಿಗ್ಗಾಂವ (38), ತಾಯಬ್ ಖುರ್ಷಿದ್ ಮಿಯ್ಯಾ ದಿಗ್ಗಾಂವ (28), ಬನ್ನು ಗುರುಬಸಪ್ಪ ಪಸರ್ (25), ಇಬ್ರಾಹಿಂ ಮಹೀಬೂಬ್ ದಿಗ್ಗಾಂವ (32) ಸೇರಿದಂತೆ ಒಟ್ಟು 12 ಜನರು ದಿಗ್ಗಾಂವ ರಸ್ತೆಯ ಹೊಲವೊಂದರಲ್ಲಿ ಗಿಡದ ಕಳಗೆ ಕುಳಿತುಕೊಂಡಾಗ ಸಿಡಿಲು ಬಡಿದು ಗಾಯಗಳಾಗಿವೆ. ಈ ಪೈಕಿ ನಾಲ್ವರು ಚಿತ್ತಾಪುರ ಆಸ್ಪತ್ರೆಯಲ್ಲಿ ಉಳಿದ 8 ಜನರು ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸಿಪಿಐ ಶಿವಾನಂದ ಅಂಬಿಗೇರ್, ಕಂದಾಯ ನೀರಿಕ್ಷಕ ಮಧುಸೂದನ ಘಾಳೆ, ಗ್ರಾಮ ಲೇಖಾಪಾಲಕ ಮೈನೋದ್ದಿನ್ ಅವರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವರದಿ ಮಾಡಿಕೊಂಡರು. ಸಿಡಿಲು ಬಡಿದು ಅನಾಹುತ ಆದ ಬಗ್ಗೆ ಕ್ಷೇತ್ರದ ಶಾಸಕ, ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರಲಾಗಿದ್ದು ಸರಕಾರದಿಂದ ಸಿಗುವ ಪರಿಹಾರ ಅತೀ ಶೀಘ್ರ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ದಿಗ್ಗಾಂವ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಮಂತ ಗುತ್ತೇದಾರ ತಿಳಿಸಿದ್ದಾರೆ.