ಸಿಡಿಲು ಬಡಿದು ಐತಿಹಾಸಿಕ ಸ್ಮಾರಕ ಮೆಹತರ್ ಮಹಲ್ ನ ಮೀನಾರ್ ಗೆ ಧಕ್ಕೆ: ಕಾರು, ಬೈಕ್ ಜಖಂ

ವಿಜಯಪುರ,ಏ.19:ನಗರದಲ್ಲಿ ಗುರುವಾರ ಸಂಜೆ ಭಾರಿ ಗುಡುಗು, ಸಿಡಿಲಿನ ಆರ್ಭಟಕ್ಕೆ ಇಲ್ಲಿನ ಜಾಮೀಯಾ ಮಸೀದಿ ರಸ್ತೆಯಲ್ಲಿರುವ ಐತಿಹಾಸಿಕ ಸ್ಮಾರಕ ಮೆಹತರ್ ಮಹಲ್ ನ ಮೀನಾರಿನ ಮೇಲ್ತುದಿ ಬಿದ್ದು ಕೆಳಗಡೆ ನಿಲ್ಲಿಸಿದ್ದ ಕಾರು, ಎರಡು ಬೈಕ್ ಜಖಂಗೊಂಡಿವೆ.

ಬೆಳಗ್ಗೆಯಿಂದ ಭಾರಿ ಬಿಸಿಲಿನ ಧಕ್ಕೆಯಿಂದ ಜನರು ಹೈರಾಣ ಆಗಿದ್ದರು. ಸಂಜೆಯಾಗುತ್ತಿದ್ದಂತೆ ಮೋಡ ಕವಿದು, ಭಾರಿ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆ ಬಿದ್ದಿದೆ.
ಮೆಹತರ ಮಹಲ್ ನ ಮಿನಾರ್ ವೊಂದರ ಮೇಲ್ಭಾಗದಲ್ಲಿ ಮಿಂಚು ಸಹಿತ ಸಿಡಿಲು ಬಡಿದಿದ್ದು, ಸಿಡಿಲಿನ ಹೊಡೆತಕ್ಕೆ ಆ ಭಾಗದ ಕಲ್ಲುಗಳು ಕೆಳಗೆ ಬಿದ್ದಿವೆ. ಇದರಿಂದಾಗಿ ಸ್ಮಾರಕದ ಎದುರಿನಲ್ಲಿ ಕೆಳಗಡೆ ನಿಲ್ಲಿಸಲಾಗಿದ್ದ ಒಂದು ಕಾರು ಮತ್ತು ಎರಡು ಬೈಕ್ ಗಳು ಜಖಂ ಗೊಂಡಿವೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.
ಉತ್ತರ ದಿಕ್ಕಿಗೆ ಮುಖ ಮಾಡಿರುವ ಈ ಸ್ಮಾರಕ ಬಲಭಾಗದಲ್ಲಿರುವ ಮಿನಾರ್ ನ ಮೇಲ್ಭಾಗಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.
ಆದಿಲ್ ಶಾಹಿ ಕಾಲದಲ್ಲಿ ಎರಡನೇ ಅಲಿ ಆದಿಲ್ ಶಾಹಿ 17ನೇ ಶತಮಾನದಲ್ಲಿ ಈ ಸ್ಮಾರಕ ನಿರ್ಮಿಸಿದ್ದಾರೆ.
ರಾತ್ರಿ ಬಹಳ ಹೊತ್ತಿನವರೆಗೆ ಗುಡುಗು, ಸಿಡಿಲು ಮುಂದುವರೆದಿತ್ತು. ಶುಕ್ರವಾರ ಬೆಳಗ್ಗೆ ತಂಪು ವಾತಾವರಣ ನಿರ್ಮಾಣವಾಗಿದೆ. ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಇನ್ನೂ ಮೋಡ ಕವಿದ ವಾತಾವರಣ ಇದೆ.