ಸಿಡಿಲು ಬಡಿದು ಇಬ್ಬರಿಗೆ ಗಾಯ: ಮನೆಗೆ ಹಾನಿ

ಉಡುಪಿ, ಎ.೧೪- ಜಿಲ್ಲೆಯಾದ್ಯಂತ ಕಳೆದ ರಾತ್ರಿ  ಗುಡುಗು ಸಹಿತ ಭಾರಿ ಮಳೆಯಾಗಿದ್ದು ಹಲವು ಕಡೆ ಅಪಾರ ಹಾನಿ ಸಂಭವಿಸಿದೆ.

ಬ್ರಹ್ಮಾವರ ತಾಲೂಕಿನ ನೈಲಾಡಿ ಬೂದಾಡಿಯ ನಾಗರತ್ನ ಭುಜಂಗ ಶೆಟ್ಟಿ ಎಂಬವರ ಮನೆಗೆ ತಡರಾತ್ರಿ ಸಿಡಿಲು ಬಡಿದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅವರ ಮನೆಯಲ್ಲಿ ಮಗು ಸೇರಿದಂತೆ ಆರು ಜನ ಇದ್ದರು. ಮನೆಯೊಳಗಿದ್ದ ಮಹಿಳೆಯ ಕೈ ಮೇಲೆ ವಿದ್ಯುತ್ ಕಿಡಿ ತಾಗಿ ಸುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ. ಅದೇ ರೀತಿ ನೀಲಾವರ ಎಂಬಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಸ್ಥಳೀಯ ನಿವಾಸಿ ರತನ್ ಶೆಟ್ಟಿ ಎಂಬವರಿಗೆ ಸಿಡಿಲು ಬಡಿದು ಗಾಯವಾಗಿರುವ ಬಗ್ಗೆ ವರದಿಯಾಗಿದೆ. ಇವರು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಾಲ್ಲೂಕು ಕಚೇರಿಯ ಮೂಲಗಳು ತಿಳಿಸಿವೆ. ಅಲ್ಲದೆ ಕಾಪು ತಾಲ್ಲೂಕಿನಾದ್ಯಂತ ರಾತ್ರಿ ಭಾರೀ ಗುಡುಗು ಸಹಿತ ಮಳೆಯಾಗಿದೆ ಮತ್ತು ಕಾರ್ಕಳ ತಾಲ್ಲೂಕು ಹಾಗೂ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಸಿಡಿಲು ಸಹಿತ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.