ಸಿಡಿಲುಬಡಿದು ೯ ಮಂದಿಗೆ ಗಾಯ

ಬೆಂಗಳೂರು, ಜು ೧೮- ರಾಜ್ಯದ್ಯಾದಂತ ಮುಂದಿನ ೨೪ ಗಂಟೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಭಾರಿ ಮಳೆಯಾಗುವ ಸಾಧ್ಯತೆಯಿದೆ ಮತ್ತು ಉತ್ತರ ಒಳನಾಡಿನ ಕರ್ನಾಟಕ ಜಿಲ್ಲೆಗಳ ಕೆಲವು ಭಾಗಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆಯಿದೆ ಮತ್ತು ದಕ್ಷಿಣ ಒಳನಾಡು ಕರ್ನಾಟಕ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ’ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಮಲೆನಾಡು ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯ ಹವಾಮಾನ ಇಲಾಖೆ ಇಂದು ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಬೆಳಗಾವಿಯಲ್ಲಿ ಇಂದು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಇದರ ಜೊತೆ ಉತ್ತರ ಒಳನಾಡಿನ ಕಲಬರುಗಿ ಮತ್ತು ಬೀದರ್ ನಲ್ಲಿಯೂ ಯೆಲ್ಲೋ ಅಲರ್ಟ್ ಇದೆ.
ಮೈಸೂರು ಭಾಗದಲ್ಲಿ ತುಂತುರು ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ೨೭ ಮತ್ತು ಕನಿಷ್ಠ ೧೯ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ನಗರದಲ್ಲಿಯೂ ಮಳೆಯ ಸಿಂಚನ ಇರಲಿದೆ.
ಜೂನ್ ೧ ಮತ್ತು ಜುಲೈ ೧೭ ರ ನಡುವೆ, ರಾಜ್ಯದಲ್ಲಿ ವಾಡಿಕೆ ೩೪೭.೬೦ ಮಿ.ಮೀ ಗೆ ಬದಲಾಗಿ ೪೫೦.೨೦ ಮಿ.ಮೀ ಮಳೆಯಾಗಿದೆ, ಇದು ಸುಮಾರು ೩೦% ಹೆಚ್ಚುವರಿ ಮಳೆಯಾಗಿದ್ದು, ರಾಜ್ಯದಾದ್ಯಂತ ಆಸ್ತಿಪಾಸ್ತಿಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ.
ಕೊಪ್ಪಳದ ಕುಷ್ಟಗಿ ತಾ. ಕೊಡತಗೇರಿ ಗ್ರಾಮದಲ್ಲಿ ಶಾಲಾ ಕಟ್ಟಡಕ್ಕೆ ಸಿಡಿಲು ತಾಗಿ ೯ ಜನರು ಗಾಯಗೊಂಡಿದ್ದಾರೆ. ಅಬ್ಬರದ ಮಳೆಯ ವೇಳೆ ರಕ್ಷಣೆಗೆ ಶಾಲಾ ಕಟ್ಟದಲ್ಲಿ ಜನರು ನಿಂತಿದ್ದ ವೇಳೆ ಈ ಅವಘಡ ಸಂಭವಿಸಿದೆ.