
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 22 :- ತಾಲೂಕಿನ ಅಪ್ಪೇನಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಸೇರಿದಂತೆ ಜಾನುವಾರುಗಳು ಸಿಡಿಲಿನ ಆರ್ಭಟಕ್ಕೆ ಮೃತಪಟ್ಟಿದ್ದು ಕೂಡ್ಲಿಗಿ ಕ್ಷೇತ್ರದ ನೂತನ ಶಾಸಕರಾದ ಡಾ ಶ್ರೀನಿವಾಸ ಅವರು ಮಲ್ಲಿಕಾರ್ಜುನ ಸಾವಿಗೆ ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ ಅಲ್ಲದೆ ಜಾನುವಾರು ಕಳಕೊಂಡ ರೈತರಿಗೂ ಸಾಂತ್ವನ ತಿಳಿಸಿದ್ದಾರೆ.
ಅವರು ಇಂದು ಬೆಳಿಗ್ಗೆ ಸಂಜೆವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿ ಬೆಂಗಳೂರಿನಲ್ಲಿ ನೂತನ ಸರ್ಕಾರದ ಮೊದಲ ಅಧಿವೇಶನ ನಡೆಯಲಿದ್ದು ಮತ್ತು ನೂತನ ಶಾಸಕರುಗಳ ಪ್ರಮಾಣ ವಚನ ಕಾರ್ಯಕ್ರಮವಿರುವುದರಿಂದ ಕ್ಷೇತ್ರಕ್ಕೆ ಈಗ ಬರಲು ಆಗಿಲ್ಲ ಭಾನುವಾರ ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಅವರು ಸಿಡಿಲಿಗೆ ಬಲಿಯಾಗಿದ್ದಾರೆ ಎಂದು ಸುದ್ದಿ ತಿಳಿದ ತಕ್ಷಣ ನನಗೆ ದುಃಖದ ಜೊತೆ ಬರ ಸಿಡಿಲು ಬಡಿದಂತಾಯಿತು ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಕೋರಿದ ಶಾಸಕ ಡಾ ಶ್ರೀನಿವಾಸ ಅವರ ಕುಟುಂಬ ವರ್ಗಕ್ಕೆ ಪತ್ರಿಕೆ ಮೂಲಕ ಸಾಂತ್ವನ ಕೋರಿದ್ದಾರೆ. ಇಂದು ಶಾಸಕರ ಪರವಾಗಿ ಮೃತ ಮಲ್ಲಿಕಾರ್ಜುನ ಮನೆಗೆ ಜಿ ಪಂ ಮಾಜಿ ಸದಸ್ಯ ಎಸ್ ವೆಂಕಟೇಶ, ತಾ ಪಂ ಮಾಜಿ ಸದಸ್ಯರಾದ ಶೃತಿ ವೆಂಕಟೇಶ ಹಾಗೂ ಗುರುಮೂರ್ತಿ ಸೇರಿದಂತೆ ಇತರರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ಶಾಸಕರ ಚರ್ಚೆ : ಸಿಡಿಲಿಗೆ ಬಲಿಯಾದ ಗ್ರಾಮಪಂಚಾಯಿತಿ ಸದಸ್ಯ ಸೇರಿದಂತೆ ಜಾನುವಾರುಗಳು ಸಹ ಬಲಿಯಾಗಿರುವ ಸಂಪೂರ್ಣ ಮಾಹಿತಿ ಕಲೆ ಹಾಕಿದ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಇಂದು ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ ಸೇರಿದಂತೆ ಕೃಷಿ ಹಾಗೂ ಸಂಬಂದಿಸಿದ ಇತರೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಧಿವೇಶನ ಮುಗಿದ ನಂತರ ಕ್ಷೇತ್ರಕ್ಕೆ ಬಂದು ಸಿಡಿಲಿಗೆ ಬಲಿಯಾದವರ ಮನೆಗೆ ಭೇಟಿ ನೀಡಿ ಸಾಂತ್ವನ ನೀಡುತ್ತೇನೆ ಆದರೆ ನೀವು ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಲ್ಲಬೇಕಾದ ಪರಿಹಾರದ ಕ್ರಮವನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆಂದು ತಿಳಿದಿದೆ.