ಸಿಡಿಲಿಗೆ ಬಲಿಯಾದ ಯುವಕನ ಕುಟುಂಬಕ್ಕೆ 24 ಗಂಟೆಯೊಳಗೆ ಪರಿಹಾರ ವಿತರಣೆ -ಶಾಸಕ ಎನ್ ವೈ ಜಿ ಸಾಂತ್ವನ.

ಕೂಡ್ಲಿಗಿ.ಏ. 17 :- ಕುರಿಕಾಯಲು ಹೋದ ಕುರಿಗಾಯಿ ಸಂಜೆ ಮನೆಗೆ ಬರುವ ಹೊತ್ತಿಗೆ ವರುಣನ ಆರ್ಭಟದಲ್ಲಿ ಸಿಡಿಲಿಗೆ ಬಲಿಯಾದ ತಾಲೂಕಿನ ನಿಂಗರಾಜ (26) ಈತನ ಕುಟುಂಬಕ್ಕೆ 24ಗಂಟೆಯೊಳಗೆ ಪರಿಹಾರದ ಹಣ ನೀಡುವಲ್ಲಿ ತಾಲೂಕು ಆಡಳಿತ ಯಶಸ್ವಿಯಾಗಿದ್ದು ಅದರ ಆದೇಶ ಪ್ರತಿಯನ್ನು ಕ್ಷೇತ್ರದ ಶಾಸಕರು 48ಗಂಟೆಯೊಳಗೆ ಮೃತರ ಕುಟುಂಬಕ್ಕೆ ನೀಡಿ ಸಾಂತ್ವನ ಹೇಳಿದ್ದಾರೆ.
ಬುಧವಾರ ಸಂಜೆ 6ಗಂಟೆ ಸುಮಾರಿಗೆ ತಾಲೂಕಿನ ಕುದುರೆಡವು ಗ್ರಾಮದ ಕುರಿಗಾಯಿ ಮಡಿವಾಳರ ನಿಂಗರಾಜ (26) ಎಂಬಾತ ಸಿಡಿಲಿಗೆ ಬಲಿಯಾದ ಸುದ್ದಿ ತಿಳಿದ ಮರುಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ಗಮನಕ್ಕೂ ತಂದಿದ್ದು ಮರುದಿನ ಗುರುವಾರದಂದು ಮಧ್ಯಾಹ್ನ 12ಗಂಟೆಯೊಳಗೆ ಹೊಸಪೇಟೆ ಸಹಾಯಕ ಆಯುಕ್ತರ ಅನುಮತಿ ಪಡೆದು ಸಿಡಿಲು ಬಡಿದ ಮೃತನ ಕುಟುಂಬಕ್ಕೆ ಆರ್ ಟಿ ಜಿ ಎಸ್ ಮೂಲಕ ಪ್ರಕೃತಿ ವಿಕೋಪದಡಿ ಯೋಜನೆಯ 4ಲಕ್ಷ ರೂ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1ಲಕ್ಷ ರೂ ಹಣವನ್ನು ವರ್ಗಾವಣೆ ಮಾಡಲಾಗಿದ್ದು 48 ಗಂಟೆಯೊಳಗೆ ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ಕುದುರೆಡವು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಆದೇಶ ಪ್ರತಿಯನ್ನು ನೀಡಿದರು. ಸದ್ಯದಲ್ಲೇ ರಾಷ್ಟ್ರೀಯ ಭದ್ರತೆ ಯೋಜನೆಯಡಿಯಲ್ಲಿ 20ಸಾವಿರ ರೂ ಮತ್ತು ಶವಸಂಸ್ಕಾರದಡಿಯಲ್ಲಿ 5ಸಾವಿರ ರೂ ಪರಿಹಾರವನ್ನು ನೀಡುವುದಾಗಿ ತಹಸೀಲ್ದಾರ್ ಮಹಾಬಲೇಶ್ವರ ಮೃತರ ಕುಟುಂಬಕ್ಕೆ ತಿಳಿಸಿದರು.