ಸಿಡಿಲಿಗೆ ಎರಡು ಎತ್ತು ಬಲಿಧಾರಾಕಾರ ಮಳೆ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆ

ಕಲಬುರಗಿ,ಜು.31-ಜಿಲ್ಲೆಯಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮಹಿಳೆಯೋರ್ವಳು ಕೊಚ್ಚಿಕೊಂಡು ಹೋಗಿರುವ ಘಟನೆ ಆಳಂದ ತಾಲೂಕಿನ ತೀರ್ಥ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಶ್ರೀದೇವಿ ಪೂಜಾರಿ (42) ಎಂಬುವರೆ ಹಳ್ಳದಲ್ಲಿ ಕೊಚ್ಚಿಹೋದ ಮಹಿಳೆ.
ಶನಿವಾರ ಸಂಜೆ ಮಹಿಳೆ ತಮ್ಮ ಜಮೀನಿನಿಂದ ಮನೆಗೆ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ. ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಈ ವೇಳೆ ತೀರ್ಥ ಗ್ರಾಮದ ಹೊರವಲಯದಲ್ಲಿರುವ ಹಳ್ಳ ದಾಟಿಕೊಂಡು ಮನೆಗೆ ಹೋಗುವಾಗ ಶ್ರೀದೇವಿ ಕೊಚ್ಚಿಕೊಂಡು ಹೋಗಿರುವುದಾಗಿ ತಿಳಿದುಬಂದಿದೆ. ಮಹಿಳೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರಿಂದ ಹುಡುಕಾಟ ನಡೆಯುತ್ತಿದೆ. ಸದ್ಯ ಮಹಿಳೆ ಪತ್ತೆಯಾಗಿಲ್ಲ, ಆಳಂದ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಳೆ ಅಬ್ಬರ
ಕೆಲ ದಿನಗಳ ಬಳಿಕ ಮತ್ತೆ ವರುಣ ಅಬ್ಬರಿಸುತ್ತಿದ್ದು, ಕಲಬುರಗಿ ಜಿಲ್ಲೆಯ ಜನ ಹೈರಾಣಾಗಿದ್ದಾರೆ. ಮಳೆಯಿಂದ ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ಕೆಲವೆಡೆ ದವಸ ಧಾನ್ಯಗಳೆಲ್ಲ ನೀರುಪಾಲಾಗಿವೆ. ಕಳೆದ ಮೂರು ದಿನದಿಂದ ದಿನವಿಡೀ ಬಿಸಿಲಿನ ವಾತಾವರಣವಿದ್ದು, ಸಂಜೆಯಾಗುತ್ತಿದಂತೆ ಮಳೆ ಅಬ್ಬರಿಸುತ್ತದೆ. ಮಳೆಯಿಂದ ಬಿತ್ತಿರುವ ಬೆಳೆಯೂ ನಾಶವಾಗುವ ಭೀತಿ ರೈತರಲ್ಲಿ ಮೂಡಿದೆ.

ಸಿಡಿಲಿಗೆ ಎರಡು ಎತ್ತು ಬಲಿ
ಜಿಲ್ಲೆಯಲ್ಲಿ ಶನಿವಾರ ಗುಡುಗು ಸಹಿತ ಭಾರಿ ಮಳೆ ಅಬ್ಬರಿಸಿದ್ದರಿಂದ ಕಾಳಗಿ ತಾಲ್ಲೂಕಿನ ಟೇಂಗಳಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿವೆ. ಈ ಸಂಬಂಧ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತಹಶೀಲ್ದಾರ ನಾಗನಾಥ ತರಗೆ ಭೇಟಿ ನೀಡಿದ್ದಾರೆ. ಎತ್ತುಗಳನ್ನು ಮರಕ್ಕೆ ಕಟ್ಟಲಾಗಿತ್ತು. ಮರದ ಮೇಲೆ ಸಿಡಿಲು ಬಿದ್ದಾಗ ಈ ದುರಂತ ಸಂಭವಿಸಿದೆ.
ಮಳೆಯಿಂದಾಗಿ ನಗರದ ಹಲವು ಕಡೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಕೆಲವು ಪ್ರದೇಶಗಳಲ್ಲಿ ಮನೆಗಳಲ್ಲಿಯೂ ನೀರು ಹೊಕ್ಕಿದ್ದರಿಂದ ನೀರನ್ನು ಹೊರ ಹಾಕುವುದರಲ್ಲಿಯೇ ಜನ ಪರಿತಪಿಸುವಂತಾಯಿತು.