ಸಿಡಿಪ್ರಕರಣ : ಸಿದ್ದುಗೆ ನೈತಿಕತೆ ಇಲ್ಲ

ಬೆಂಗಳೂರು, ಮಾ. ೨೮- ಮಾಜಿ ಸಚಿವ ಮೇಟಿ ಅವರ ರಾಸಲೀಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಿಡಿ ಪ್ರಕರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗೃಹ ಸಚಿವ ಬಸವರಾಜಬೊಮ್ಮಾಯಿ ಹೇಳಿದ್ದಾರೆ.
ಸಿಡಿ ಪ್ರಕರಣದ ಯುವತಿಯನ್ನು ಪತ್ತೆ ಹಚ್ಚದ ಗೃಹ ಇಲಾಖೆಯ ವೈಫಲ್ಯದ ಬಗ್ಗೆ ಸಿದ್ಧರಾಮಯ್ಯ ಟೀಕೆ ಮಾಡಿದ್ದಾರೆ. ಇವರು ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದ ಮೇಟಿ ಅವರ ಬಗ್ಗೆ ಸಂತ್ರಸ್ತ ಮಹಿಳೆಯೇ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಸಿಐಡಿ ತನಿಖೆ ನಡೆಸಿ ಪ್ರಕರಣವನ್ನು ಮುಚ್ಚಿ ಹಾಕಲಾಯಿತು ಎಂಬುದನ್ನು ಸಿದ್ಧರಾಮಯ್ಯನವರಿಗೆ ನೆನಪು ಮಾಡಬಯುಸುತ್ತೇನೆ ಎಂದರು.
ಮೇಟಿ ಪ್ರಕರಣದಲ್ಲಿ ತನಿಖೆ ಇರಲೀ, ಮೊದಲು ವಿಚಾರಣೆ ನಡೆಸಿ ನಂತರ ಸಿಐಡಿಗೆ ಪ್ರಕರಣ ಬದಲಾಯಿತು. ಆದರೆ ನಾವು ಈಗಿನ ಸಿಡಿ ಪ್ರಕರಣದ ವಿಶೇಷ ತನಿಖಾ ತಂಡ ರಚಿಸಿ ತನಿಖಾ ತಂಡಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸತ್ಯ ಕಂಡು ಹಿಡಿಯುತ್ತದೆ ಎಂಬ ವಿಶ್ವಾಸ ನನ್ನದು ಎಂದರು.
ಸಿಡಿ ಯುವತಿಗೆ ರಕ್ಷಣೆ ನೀಡುವುದಾಗಿ ಈಗಾಗಲೇ ಹೇಳಿದ್ದೇವೆ. ಆಕೆಯ ಮನವಿಯಂತೆ ಆಕೆಯ ತಂದೆ ತಾಯಿಗೆ ಈಗಾಗಲೇ ರಕ್ಷಣೆ ನೀಡಿದ್ದೇವೆ. ನಿಸಂಶಯವಾಗಿ ಆಕೆಗೂ ರಕ್ಷಣೆ ನೀಡುತ್ತೇವೆ ಎಂದು ಅವರು ಹೇಳಿ, ಸಿಡಿ ಯುವತಿಗೆ ಈಗಾಗಲೇ ಐದು ನೋಟೀಸ್ ಜಾರಿ ಮಾಡಲಾಗಿದೆ. ಯುವತಿಗೆ ರಕ್ಷಣೆ ನೀಡುವುದಕ್ಕೆ ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.
ಎಸ್‌ಐಟಿ ತಂಡ ಯುವತಿಯನ್ನು ಪತ್ತೆ ಹಚ್ಚಿದೆಯಾ ಎಂಬ ಪ್ರಶ್ನೆಗೆ ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಿಮಗಿರುವಷ್ಟು ಮಾಹಿತಿ ನನಗೂ ಇದೆ. ಎಸ್‌ಐಟಿ ಈ ಪ್ರಕರಣದಲ್ಲಿ ಸತ್ಯ ಕಂಡು ಹಿಡಿಯುತ್ತದೆ. ಇದರಲ್ಲಿ ಅನುಮಾನ ಬೇಡ. ಕ್ರಮಬದ್ಧವಾಗಿ ಪೊಲೀಸ್ ತನಿಖೆ ನಡೆದಿದೆ ಎಂದು ಅವರು ಹೇಳಿದರು.
ಯಾರು ಏನೆ ಹೇಳಲಿ, ಹೊರಗೆ ಯಾವುದೇ ಪ್ರತಿಭಟನೆಗಳು ನಡೆಯಲಿ, ಯಾವುದಕ್ಕೂ ಎಸ್‌ಐಟಿ ತಲೆ ಕೆಡಿಸಿಕೊಳ್ಳದೆ ಮುಕ್ತವಾಗಿ ತನಿಖೆ ನಡೆಸುತ್ತಿದೆ. ತನಿಖೆಯ ಮಾಹಿತಿಗಳನ್ನು ಪ್ರತಿದಿನ ನೀಡಬೇಕು ಎಂಬ ನಿರೀಕ್ಷೆ ಸರಿಯಲ್ಲ. ಯಾವಾಗ ಅಧಿಕೃತವಾಗಿ ವಿವರ ನೀಡಬೇಕೋ ಆಗ ಮಾತ್ರ ಎಸ್‌ಐಟಿ ವಿವರ ನೀಡುತ್ತದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಿದೆ ಎಂದು ಗೃಹ ಸಚಿವರು ಹೇಳಿದರು.