ಸಿಡಿದೇಳುವ ಮನಸ್ಥಿತಿಗಳು ಹೆಚ್ಚಾಗಬೇಕು

ಬೀದರ:ಜ.16:ಕಲುಷಿಗೊಳ್ಳುತ್ತಿರುವ ಇಂದಿನ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ತಿಳಿಗೊಳಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶಂಭುಲಿಂಗ ವಾಲ್ದೊಡ್ಡಿಯವರು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ (ಪ.ಪೂ) ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು, ಬೀದರನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ 2023-24 ಸಮಾರೋಪ ಸಮಾರಂಭವು ಬೀದರಿನ ರಾಮಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಶಂಭುಲಿಂಗ ವಾಲ್ದೊಡ್ಡಿಯವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಹೆಣ್ಣುಮಕ್ಕಳಲ್ಲಿ ಸೇವಾಮನೋಭಾವ ಎನ್ನುವಂತಹದ್ದು ಹುಟ್ಟಿನಿಂದಲೇ ಬಂದಿರುತ್ತದೆ. ಅವಳು ತ್ಯಾಗಮಯಿ ಜೀವಿಯಾಗಿದ್ದರೂ ಅವಳ ಮೇಲಿನ ದೌರ್ಜನ್ಯಗಳು ನಿಲ್ಲದೆ ನಿರಂತರವಾಗಿ ನಡೆಯುತ್ತಿರುವುದು ವಿಷಾದದ ಸಂಗತಿ. ಶಿಕ್ಷಣ ಪಡೆದರಷ್ಟೇ ಸಾಲದು ಗೊಡ್ಡು ಸಂಪ್ರದಾಯಗಳ ವಿರುದ್ಧ ಸಿಡಿದೇಳುವ ಮನಸ್ಥಿತಿಗಳು ಹೆಚ್ಚಾಗಬೇಕು ಅಂದಾಗ ಮಾತ್ರ ಮಹಿಳೆ ಸುರಕ್ಷಿತವಾಗಿರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಿಜಯಕುಮಾರ ತೋರಣೆಕರ ಮಾತನಾಡುತ್ತ ಕಳೆದ ಏಳು ದಿನಗಳಿಂದ ಈ ಶಿಬಿರದಲ್ಲಿ ನಡೆದ ಕಾರ್ಯಕ್ರಮಗಳು ಉಪನ್ಯಾಸಗಳು ಚಾಚುತಪ್ಪದೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತಂದದ್ದಾದರೆ ಇತರ ವಿದ್ಯಾರ್ಥಿನಿಯರಿಗಿಂತ ವ್ಯಕ್ತಿತ್ವದಲ್ಲಿ ಬದಲಾವಣೆ ಕಂಡುಕೊಳ್ಳಬಲ್ಲಿರಿ. ಅಲ್ಲದೆ ಅವರಿಗೆ ಮಾದರಿಯಾಗಬಲ್ಲಿರಿ ಎಂದರು.
ವೇದಿಕೆಯ ಮೇಲೆ ಇತಿಹಾಸ ಉಪನ್ಯಾಸಕ ಭಗವಾನ ಬಿರಾದಾರ, ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಶ್ರೀಮತಿ ವರಲಕ್ಷ್ಮೀ ಜಾಧವ ಉಪಸ್ಥಿತರಿದ್ದು ಮಾತನಾಡಿದರು.
ಆರಂಭದಲ್ಲಿ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ಭುಸ್ರಾ ಸ್ವಾಗತ ಗೀತೆ ಹಾಡಿದರೆ ಕುಮಾರಿ ವೈಷ್ಣವಿ ಕೃಷ್ಣವೇಣಿ, ಭಾಗ್ಯಶ್ರೀ ಎನ್.ಎಸ್.ಎಸ್. ಗೀತೆ ಹಾಡಿದರು. ಕುಮಾರಿ ಸುವಾರ್ತಾ ವಂದಿಸಿದರು.