ಸಿಡಿದೆದ್ದ ಪಾಟೀಲ್‌ಗೆ ಸಿದ್ದು ಮದ್ದು

ಸಂಜೆ ರಾಜಿ ಸಂಧಾನ

ಬೆಂಗಳೂರು, ನ. ೨೯- ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ವಿರುದ್ಧ ಸಿಡಿದೇದ್ದಿರುವ ಕಾಂಗ್ರೆಸ್‌ನ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರನ್ನು ಸಮಾಧಾನಗೊಳಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಾಗಿದ್ದಾರೆ.ಸಚಿವರಾದ ಕೃಷ್ಣಬೈರೇಗೌಡ ಮತ್ತು ಪ್ರಿಯಾಂಕ ಖರ್ಗೆ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿ ತಮಗೆ ಪತ್ರ ಬರೆದಿರುವ ಶಾಸಕ ಬಿ.ಆರ್. ಪಾಟೀಲ್ ಅವರನ್ನು ಬೆಂಗಳೂರಿಗೆ ಬರುವಂತೆ ಮುಖ್ಯಮಂತ್ರಿಗಳು ಹೇಳಿದ್ದು, ಬಿ.ಆರ್. ಪಾಟೀಲ್ ಅವರ ಸಮ್ಮುಖದಲ್ಲೇ ಸಚಿವ ಕೃಷ್ಣಬೈರೇಗೌಡ ಮತ್ತು ಪ್ರಿಯಾಂಕ ಖರ್ಗೆ ಅವರ ಜತೆ ಮುಖ್ಯಮಂತ್ರಿಗಳು ಇಂದು ಸಂಜೆ ಸಂಧಾನ ಸಭೆ ನಡೆಸುವರು.ಮುಖ್ಯಮಂತ್ರಿಗಳ ಸಂಧಾನ ಸಭೆ ಬಗ್ಗೆ ಖುದ್ಧು ಶಾಸಕ ಬಿ.ಆರ್. ಪಾಟೀಲ್ ಅವರೇ ಕಲಬುರುಗಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಮುಖ್ಯಮಂತ್ರಿಗಳಿಗೆ ತಾವು ಬರೆದಿರುವ ಪತ್ರದ ಅಂಶಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಸಂಧಾನ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ತಾವು ಪಾಲ್ಗೊಳ್ಳುತ್ತಿರುವುದಾಗಿ ಹೇಳಿದರು.
ನಿನ್ನೆ ಶಾಸಕ ಬಿ.ಆರ್. ಪಾಟೀಲ್ ರವರು ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಪ್ರಿಯಾಂಕ ಖರ್ಗೆ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅವರ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿಂದೆ ಕೆ ಆರ್‌ಐಡಿಎಲ್ ಕಾಮಗಾರಿ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದಾಗ ಪ್ರಿಯಾಂಕ ಖರ್ಗೆ ಪರವಾಗಿ ಉತ್ತರ ನೀಡಿದ್ದ ಕೃಷ್ಣಬೈರೇಗೌಡ ಅವರು ತಮ್ಮ ಬಗ್ಗೆ ಅನುಮಾನ ಬರುವಂತೆ ಮಾತನಾಡಿದ್ದರು. ಈ ಬಗ್ಗೆ ಸಂಬಂಧಪಟ್ಟ ಸಚಿವ ಪ್ರಿಯಾಂಕಖರ್ಗೆ ಸಹ ಅನುಮಾನ ನಿವಾರಣೆ ಮಾಡಲಿಲ್ಲ. ಈ ಬಗ್ಗೆ ತನಿಖೆಯಾಗಬೇಕು. ನಾನು ತಪ್ಪು ಮಾಡಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಕಳಂಕ ಹೊತ್ತು ಬೆಳಗಾವಿ ಅಧಿವೇಶನಕ್ಕೆ ಬರುವುದಿಲ್ಲ. ತನಿಖೆ ಮಾಡಿ ಎಂದು ಮುಖ್ಯಮಂತ್ರಿ ಅವರಿಗೆ ಬಹಿರಂಗವಾಗಿಯೇ ಪತ್ರ ಬರೆದಿದ್ದರು.
ಶಾಸಕ ಬಿ.ಆರ್. ಪಾಟೀಲ್ ರವರ ಪತ್ರ ರಾಜಕೀಕಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿತ್ತು.
ಈ ಹಿಂದೆ ಸಹ ಶಾಸಕ ಬಿ.ಆರ್. ಪಾಟೀಲ್ ರವರು ಸಚಿವರುಗಳು ಶಾಸಕರುಗಳಿಗೆ ಸ್ಪಂದಿಸುತ್ತಿಲ್ಲ ಅವರ ಪತ್ರಗಳಿಗೆ ಕಿಮ್ಮುತ್ತು ನೀಡುತ್ತಿಲ್ಲ. ಶಾಸಕಾಂಗ ಪಕ್ಷ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಆ ಪತ್ರ ಸಹ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ನಂತರ ಮುಖ್ಯಮಂತ್ರಿಗಳು ಶಾಸಕಾಂಗ ಪಕ್ಷದ ಸಭೆ ಕರೆದು ಶಾಸಕರ ಮುನಿಸನ್ನು ಶಮನ ಮಾಡಿ ಸಚಿವರುಗಳು ಶಾಸಕರುಗಳಿಗೆ ಸ್ಪಂದಿಸುವಂತೆ ತಾಕೀತು ಮಾಡಿದ್ದರು.
ಈ ಎಲ್ಲ ಬೆಳವಣಿಗೆಗಳ ನಂತರ ಈಗ ಮತ್ತೆ ಶಾಸಕ ಬಿ.ಆರ್. ಪಾಟೀಲ್ ಸಚಿವ ಕೃಷ್ಣಬೈರೇಗೌಡ ವಿರುದ್ಧ ಸಿಡಿದೆದ್ದಿದ್ದಾರೆ. ಸಚಿವ ಕೃಷ್ಣಬೈರೇಗೌಡ ಅವರು ಮಾಡಿರುವ ಆರೋಪದಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಪುನರುಚ್ಛಾರ
ಮುಖ್ಯಮಂತ್ರಿಗಳಿಗೆ ತಾವು ಬರೆದಿರುವ ಪತ್ರದ ಬಗ್ಗೆ ಕಲಬುರುಗಿಯಲ್ಲಿಂದು ಪುನರುಚ್ಚರಿಸಿದ ಶಾಸಕ ಬಿ.ಆರ್. ಪಾಟೀಲ್, ಸಚಿವ ಕೃಷ್ಣಬೈರೇಗೌಡ ತಮ್ಮ ವಿರುದ್ಧ ಮಾಡಿರುವ ಆರೋಪದ ಬಗ್ಗೆ ತನಿಖೆಯಾಗಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ತಮ್ಮ ವಿರುದ್ಧದ ಆರೋಪದ ಬಗ್ಗೆ ಸಮಗ್ರ ತನಿಖೆಯಾಗದ ಹೊರತು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಇಷ್ಟು ದಿನ ಎಲ್ಲ ರೀತಿಯ ಅವಮಾನಗಳನ್ನು ಸಹಿಸಿಕೊಂಡಿದ್ದಾಯಿತು ಇನ್ನು ಮುಂದೆ ಯಾವುದೇ ಕಾರಣಕ್ಕೂ ಸುಮ್ಮನೆ ಇರುವುದಿಲ್ಲ ಎಂದು ಅವರು ಹೇಳಿದರು.
ಕೃಷ್ಣಬೈರೇಗೌಡ ಪ್ರತಿಕ್ರಿಯೆ
ಶಾಸಕ ಬಿ.ಆರ್. ಪಾಟೀಲ್ ರವರ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣಬೈರೇಗೌಡ, ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸುತ್ತಾರೆ. ನಾನಂತೂ ಶಾಸಕ ಬಿ.ಆರ್. ಪಾಟೀಲ್ ಅವರನ್ನು ಅವಮಾನಕ್ಕೊಳಗಾಗಿಸುವ ರೀತಿ ಮಾತನಾಡಿಲ್ಲ. ಅವರು ತಪ್ಪು ಅರ್ಥ ಮಾಡಿಕೊಂಡಂತಿದೆ ಎಂದು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಬೆಳವಣಿಗಗಳ ನಡುವೆಯೇ ಮುಖ್ಯಮಂತ್ರಿಗಳು ಇಂದು ಶಾಸಕ ಹಾಗೂ ಸಚಿವರ ಸಂದಾನ ಸಭೆ ನಡೆಸಿ ಎಲ್ಲವನ್ನೂ ಬಗೆಹರಿಸುವ ಪ್ರಯತ್ನ ನಡೆಸುವರು.
ಇಂದು ಸಂಜೆ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಈ ಸಂಧಾನ ಸಭೆ ನಡೆಯಲಿದೆ ಎಂದು ಹೇಳಲಾಗಿದೆ.

ಪಾಟೀಲ್ ಜತೆ ಚರ್ಚೆ
ಸಚಿವ ಕೃಷ್ಣಬೈರೇಗೌಡರ ವಿರುದ್ದ ಪತ್ರ ಬರೆದಿರುವ ಶಾಸಕ ಬಿ. ಆರ್ ಪಾಟೀಲ್ ಅವರ ಜತ ಮಾತನಾಡಿದ್ದೇನೆ. ಅವರಿಗೆ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದೇನೆ. ಬೆಂಗಳೂರಿಗೆ ಬಂದ ನಂತರ ಅವರ ಜತೆ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಬೆಂಗಳೂರು ಟೆಕ್ ಶೃಂಗಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೃಷ್ಣಬೈರೇಗೌಡ ಹಾಗೂ ಪ್ರಿಯಾಂಕ ಖರ್ಗೆ ವಿರುದ್ಧ ಬಿ.ಆರ್. ಪಾಟೀಲ್ ತಮಗೆ ಪತ್ರ ಬರೆದಿದ್ದಾರೆ. ಅವರ ಜತೆ ನಿನ್ನೆ ಮಾತನಾಡಲು ಸಾಧ್ಯವಾಗಲಿಲ್ಲ. ಇಂದು ಬೆಳಗ್ಗೆ ಮಾತನಾಡಿದ್ದೇನೆ. ಬೆಂಗಳೂರಿಗೆ ಬರುವಂತೆ ಸೂಚನೆ ನೀಡಿದ್ದೇನೆ. ಅವರು ಬಂದ ನಂತರ ಅವರ ಜತೆ ಮಾತನಾಡಿ ಎಲ್ಲವನ್ನೂ ಬಗೆಹರಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.