ಸಿಡಬ್ಲ್ಯೂ ಆರ್ ಸಿ ಶಿಫಾರಸು ಎತ್ತಿಹಿಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ

ನವದೆಹಲಿ, ಆ.30- ಹದಿನೈದು ದಿನಗಳ ಕಾಲ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿದ ಶಿಫಾರಸ್ಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿದಿದೆ.
ಇದರಿಂದಾಗಿ ಭವಿಷ್ಯದಲ್ಲಿ ರಾಜ್ಯದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ.
ಎರಡೂ ರಾಜ್ಯಗಳು ತಮ್ಮ ನಿಲುವಿಗೆ ಅಂಟಿಕೊಂಡಿ ದ್ದರಿಂದ ‌ನ್ಯಾಯಾಲಯದ ಕಟೆಕಟೆಯಲ್ಲಿ ವಾದ ಮಂಡಿಸಲು ಸಜ್ಜಾಗಿವೆ.
ತಮಿಳುನಾಡಿಗೆ ನೀರು ಹರಿಸುವ ಕುರಿತಂತೆ ದೆಹಲಿಯಲ್ಲಿ ಇಂದು ನಡೆದ ಕಾವೇರಿ ನೀರು ನಿರ್ವಹಣಾ ಸಭೆಯಲ್ಲಿ ತಮಿಳುನಾಡು ಪರ ಹಾಜರಾಗಿದ್ದ ಎಸಿಎಸ್ ಸಂದೀಪ್ ಸಕ್ಸೇನಾ ಕರ್ನಾಟಕ ಕೂಡಲೇ 50.10 ಟಿಎಂಸಿ ನೀರು ಹರಿಸಬೇಕು. 80.37 ಟಿಎಂಸಿ ನೀರು ಕರ್ನಾಟಕ
ಹರಿಸಬೇಕಿತ್ತು. ಆದರೆ ಜೂನ್ 1 ರಿಂದ ಅಗಸ್ಟ್ 27 ವರೆಗೂ 30.17 ಟಿಎಂಸಿ ನೀರು ಹರಿಸಿದ್ದು ಕೂಡಲೇ ಬಾಕಿ ನೀರು ಬಿಡಬೇಕು ಎಂದು ಒತ್ತಾಯಿಸಿತು.
ತಮಿಳುನಾಡಿನ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕದ ಪರ ಎಸಿಎಸ್ ರಾಕೇಶ್ ಸಿಂಗ್, ರಾಜ್ಯದಲ್ಲಿ ಶೇ.47 ರಷ್ಟು ಮಳೆ ಕೊರತೆಯಿದ್ದು, ಜಲಾಶಯಗಳಲ್ಲಿ ನೀರು ಸಂಗ್ರಹವಾಗದ ಕಾರಣ ನೀರು ಬಿಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ತಮಿಳುನಾಡಿಗೆ ನೀರು ಹರಿಸಿದರೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ. ನಿತ್ಯ 3000 ನೀರು ಹರಿಸಲು ಸಮರ್ಥವಾಗಿದೆ ಎಂದು ವಾದಿಸಿದರು.
ಈ ಪ್ರಸ್ತಾಪಕ್ಕೆ ಒಪ್ಪದ ತಮಿಳುನಾಡು,ನಿತ್ಯ 24,000 ಕ್ಯೂಸೆಕ್‌ನಂತೆ 10 ದಿನಗಳ ಕಾಲ ಬಿಡಬೇಕು ಎಂದು ಪಟ್ಡುಹಿಡಿಯಿತು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರಾಧಿಕಾರದ ಅಧಿಕಾರಿಗಳು ನೀರು ಬಿಡಲು ಸಾಧ್ಯವಿಲ್ಲ ಎಂಬ ವಾದವನ್ನು ತಳ್ಳಿಹಾಕಿದರು. ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶದ ಅನುಸಾರ ನೀರು ಹರಿಸಿ ಎಂದು ಸೂಚಿಸಿತು.
ಈ ಆದೇಶ ಉಭಯ ರಾಜ್ಯ್ಮಗಳು ಆಕ್ಷೇಪ ವ್ತಕ್ತಪಡಿಸಿವೆ. ಶುಕ್ರವಾರ ಸುಪ್ರೀಂಕೋರ್ಟ್ ನಲ್ಲಿ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ತಮ್ಮ ವಾದಗಳನ್ನು ಪ್ರತಿಪಾದಿಸಲು ಮುಂದಾಗಿವೆ.
ಇದೇ ವೇಳೆ ಪ್ರಾಧಿಕಾರ ಇದೇ ಆದೇಶವನ್ನು ಅಂಕಿ ಅಂಶಗಳ ಸಮೇತ ಸುಪ್ರೀಂಕೋರ್ಟಿಗೆ ತಿಳಿಸಲು ಮುಂದಾಗಿದೆ.