ಸಿಟಿ ರವಿ ಬೆಂಬಲ – ಮಾಲಿಕಯ್ಯ ವಿ. ಗುತ್ತೇದಾರ ನೇತೃತ್ವಈಡಿಗ-ಬಿಲ್ಲವ ಬೇಡಿಕೆ ಚರ್ಚೆಗೆ ಸಿಎಂ ಬಳಿಗೆ ಶೀಘ್ರ ಶಾಸಕರ ನಿಯೋಗ

ಕಲಬುರಗಿ.ಜೂ.23: ಕಲ್ಯಾಣ ಕರ್ನಾಟಕ ಭಾಗದ ಆರ್ಯ ಈಡಿಗ ಸಮಾಜದ ನೇತೃತ್ವದಲ್ಲಿ ಸಮುದಾಯದ ಶ್ರೀಗಳಾದ ಡಾ. ಪ್ರಣವಾನಂದ ಶ್ರೀಗಳು ಹಾಗೂ ಈಡಿಗ ನಾಯಕರು ಜೂ. 20 ರಂದು ಪ್ರಾರಂಭಿಸಲು ಉದ್ದೇಶಿಸಿದ ಅಮರಣಾಂತ ಉಪವಾಸವನ್ನು ಸರಕಾರದ ಶಾಸಕರನ್ನು ಒಳಗೊಂಡ ನಿಯೋಗ ಹಾಗೂ ಸಮುದಾಯದ ನಾಯಕ ಮಾಲಿಕಯ್ಯ ಗುತ್ತೇದಾರ ನೇತೃತ್ವದಲ್ಲಿ ಸಂಧಾನ ನಡೆಸಿ ಕೈಬಿಡಲಾಗಿದೆ.
ಬೇಡಿಕೆಗಳ ಬಗ್ಗೆ ಶಾಸಕರ ನಿಯೋಗವು ಸಮುದಾಯದ ನಾಯಕರೊಂದಿಗೆ ಜುಲೈ 5 ರ ಮೊದಲಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸೂಚನೆ ಬಂದಿರುವುದಾಗಿ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ ಎಂದು ಆರ್ಯ ಈಡಿಗ ಕೇಂದ್ರ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ ತಿಳಿಸಿದ್ದಾರೆ.
ಡಾ. ಪ್ರಣವಾನಂದ ಶ್ರೀಗಳ ನೇತೃತ್ವದ ನಿರಶನ ಸ್ಥಳಕ್ಕೆ ಕಲಬುರಗಿ ಜಿಲ್ಲೆಯ ಶಾಸಕರಾದ ಬಸವರಾಜ ಮುತ್ತಿಮೂಡು, ಶಶಿಲ್ ಜಿ. ನಮೋಶಿ, ಸುಭಾಷ್ ಆರ್. ಗುತ್ತೇದಾರ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಇವರನ್ನು ಒಳಗೊಂಡ ನಿಯೋಗವು ಮಾಲಿಕಯ್ಯ ಗುತ್ತೇದಾರ ಸಮ್ಮುಖದಲ್ಲಿ ಸಂಧಾನ ನಡೆಸಿ ಸ್ವಾಮೀಜಿಗಳ ಮನವೊಲಿಸಿ ಜುಲೈ 5 ರ ಮೊದಲು ಮುಖ್ಯ ಮಂತ್ರಿಗಳ ಸಮ್ಮುಖ ಚರ್ಚಿಸಿ ಪ್ರಮುಖ ಎರಡು ಬೇಡಿಕೆಗಳಾದ ಪ್ರತ್ಯೇಕವಾಗಿ ಈಡಿಗ-ಬಿಲ್ಲವರ 26 ಪಂಗಡಗಳಿಗಾಗಿ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಸ್ಥಾಪನೆ ಹಾಗೂ ಕುಲಕಸುಬು (ಸೇಂದಿ ವೃತ್ತಿ) ಪುನರಾರಂಭಿಸುವುದರ ಬಗ್ಗೆ ತಕ್ಷಣ ನಿರ್ಧಾರ ಪ್ರಕಟಿಸಲು ಮನವಿ ಮಾಡುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಅಮರಣಾಂತ ಉಪವಾಸ ಕೈಬಿಡಲಾಗಿದೆ. ನಿರಶನದಲ್ಲಿ ಜಿಲ್ಲೆಗಳಿಂದ ಪಾಲ್ಗೊಂಡ ಸಮುದಾಯದ ಬಾಂಧವರಿಗೆ ಕೃತಜ್ಞತೆ ವ್ಯಕ್ತಪಡಿಸುವುದಾಗಿ ಸತೀಶ್ ಗುತ್ತೇದಾರ ತಿಳಿಸಿದರು.

ಬೇಡಿಕೆಗೆ ಸಿ ಎಂ, ಸಿಟಿ ರವಿ ಸಕಾರಾತ್ಮಕ ಸ್ಪಂದನೆ:
ಈಗಾಗಲೇ ರಾಜ್ಯದ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮತ್ತು ಉಪಾಧ್ಯಕ್ಷರಾದ ಮಾಲಿಕಯ್ಯ ಗುತ್ತೇದಾರ ಅವರು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು ತಕ್ಷಣ ಬೇಡಿಕೆಗಳನ್ನು ಈಡೇರಿಸಿ ಘೋಷಣೆ ಮಾಡಿಸಲಾಗುವುದು. ಈಡಿಗ, ಬಿಲ್ಲವ ಸೇರಿದಂರೆ 26 ಪಂಗಡಗಳನ್ನು ಒಳಗೊಂಡ ಸಮುದಾಯದವರು ಆತಂಕಪಡದೆ ಬಿಜೆಪಿ ಸರಕಾರವು ತಮ್ಮ ಬಗ್ಗೆ ಸಕಾರಾತ್ಮಕ ಸ್ಪಂದನೆ ಮಾಡಲಿದೆ ಎಂದು ನಳಿನ್ ಕುಮಾರ್ ಕಟೀಲ್ ಸಮುದಾಯದ ಪ್ರಮುಖರಿಗೆ ಈಗಾಗಲೇ ಭರವಸೆ ನೀಡಿದ್ದಾರೆ. ಆರ್ಯ ಈಡಿಗ ಸಮಾಜದ ಬಾಂಧವರು ಕೇಂದ್ರ ಸಮಿತಿಯ ಕಾದು ನೋಡುವ ನಿರ್ಧಾರಕ್ಕೆ ಸಹಕರಿಸಬೇಕು ಎಂದರು. ಕೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆದು ಈಡಿಗರು-ಬಿಲ್ಲವರ ಸೇರಿದಂತೆ ಸಮುದಾಯದವರ ಬೇಡಿಕೆ ನ್ಯಾಯಯುತವಾದುದು ಈಡೇರಿಸುವುದು ಒಳ್ಳೆಯದು ಎಂದು ಒತ್ತಾಯಿಸಿದ್ದಾರೆ.
ರಾಜ್ಯಾದ್ಯಂತ ಬೆಂಬಲ ವ್ಯಕ್ತ :
ಕಲಬುರಗಿಯಲ್ಲಿ ಜೂ.20 ರಂದು ನಡೆದ ಅಮರಣಾಂತ ಹೋರಾಟಕ್ಕೆ ಕರ್ನಾಟಕದ ಸುಮಾರು 17 ಜಿಲ್ಲೆಗಳ ಪ್ರತಿನಿಧಿಗಳು ಪಾಲ್ಗೊಂಡು ವ್ಯಾಪಕ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಅಭಿನಂದನೆ ವ್ಯಕ್ತಪಡಿಸಲಾಗಿದೆ. ರಾಜ್ಯದ ಪ್ರಮುಖ ಈಡಿಗ ಬಿಲ್ಲವ, ನಾಮಧಾರಿ, ಕಲಾಲ್ ಸಮುದಾಯದ ನಾಯಕರು ಅಖಿಲ ಭಾರತ ಬಿಲ್ಲವ ಮಹಾಮಂಡಳದ ಪದಾಧಿಕಾರಿಗಳು, ರಾಜ್ಯ ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದು ಶೀಘ್ರದಲ್ಲೇ ಬೆಂಗಳೂರನಲ್ಲಿ ಸಭೆ ಸೇರಿ ವಿಸ್ತøತ ರೂಪುರೇಷೆ ಸಿದ್ಧತೆ ಮಾಡಲಾಗುತ್ತದೆ ಎಂದು ಸತೀಶ್ ಗುತ್ತೇದಾರ್ ಹೇಳಿದರು.

ಬೇಡಿಕೆ ಕೇಂದ್ರ ಸಚಿವರ ಗಮನಕ್ಕೆ :
ಈಡಿಗರ ನ್ಯಾಯಯುತವಾದ ಬೇಡಿಕೆ ಬಗ್ಗೆ ಕೇಂದ್ರದ ಸಚಿವರ ಗಮನಕ್ಕೆ ತರಲು ಸಮುದಾಯದ ನಾಯಕರು ಚಿಂತನೆ ಮಾಡುತ್ತಿದ್ದು. ಬಹು ಭಾಷಾ ಚಿತ್ರನಟ ಸುಮನ್ ಕೇಂದ್ರದ ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವರಾದ ಜಿ ಕಿಶನ್ ರೆಡ್ಡಿಯವರ ಜೊತೆ ಸಮಾಲೋಚಿಸುವುದಾಗಿ ತಿಳಿಸಿದ್ದಾರೆ.
ಕೇಂದ್ರ sಸಚಿವರಾದ ಶ್ರೀಪಾದ ಯಸ್ಸೋ ನಾಯಕ ರಾಜನಾಥ ಸಿಂಗ್, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರ ಗಮನಕ್ಕೂ ತರಲು ಸಿದ್ಧತೆ ನಡೆದಿದೆ.
ಜುಲೈ 5 ಅಂತಿಮ ಗಡುವು :
ಜುಲೈ 5 ರ ಮುಂಚಿತವಾಗಿ ಈಡಿಗ -ಬಿಲ್ಲವ ಸಮುದಾಯದ ಬೇಡಿಕೆ ಈಡೇರಿಸಲು ಮಾಲಿಕಯ್ಯ ವಿ. ಗುತ್ತೇದಾರರ ನೇತೃರ್ವದ ಶಾಸಕರ ನಿಯೋಗವು ಯಶಸ್ವಿಯಾಗುವ ನಂಬಿಕೆ ಇದ್ದು ಪಕ್ಷಾತೀತ ಹೋರಾಟಕ್ಕೆ ಜಯ ಸಿಗುವುದಾಗಿ ಕೇಂದ್ರ ಸಮಿತಿಯ ಆಶಾವಾದ ಹೊಂದಿದೆ ಎಂದು ಹೇಳಿದರು.
ಕೊಟ್ಟ ಮಾತು ಉಳಿಸಲು ಕರೆ :
ಈಡಿಗ ಸಮಾಜದ ಡಾ ಪ್ರಣವಾನಂದ ಸ್ವಾಮಿಗಳು ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕಲ್ಯಾಣ ಕರ್ನಾಟಕದ ಗಂಗಾವತಿಯಲ್ಲಿ ನಡೆದ ಸಮಾವೇಶದಲ್ಲಿ ಕೈಗೊಂಡ ನಿರ್ಣಯದಂತೆ ಹೋರಾಟಕ್ಕೆ ರೂಪು ನೀಡಿದ್ದು 158 ಕಿ.ಮಿ. ಪಾದಯಾತ್ರೆಯ ನಂತರ ಕೂಡಾ ಸ್ಪಂದಿಸದೆ ಮೌನವಹಿಸಿದ ಸರಕಾರಕ್ಕೆ ಚುರುಕು ಮುಟ್ಟಿಸಲು ಅಮರಣಾಂತ ಉಪವಾಸ ಸತ್ಯಾಗ್ರಹ ಅನಿವಾರ್ಯವಾಗಿತ್ತು.ಈಗ ಭರವಸೆ ಒಪ್ಪಿ ಹಿಂಪಡೆಯಲಾಗಿದೆ. ಕೊಟ್ಟ ಮಾತು ಉಳಿಸಿ ಸಮುದಾಯದ ಸಾಮಾಜಿಕ – ಆರ್ಥಿಕ ಅಭಿವೃದ್ಧಿಗೆ ನೆರವಾಗುವಂತೆ ಕೂಡಾ ಕೋರಿದ್ದಾರೆ. ಕಲ್ಯಾಣ ಕರ್ನಾಟಕದ 39 ಅಸೆಂಬ್ಲಿ ಕ್ಷೇತ್ರಗಳಲ್ಲಿ 17 ರಲ್ಲಿ ಈಡಿಗರ ಪ್ರಾಬಲ್ಯವಿದ್ದು ನಿರ್ಣಾಯಕವಾಗಲಿದೆ. ಸುಮಾರು 18 ವರ್ಷಗಳಿಂದ ವಿವಿಧ ರಾಜಕೀಯ ಪಕ್ಷಗಳು ಸಮುದಾಯದ ಬೇಡಿಕೆ ಕಡೆಗಣಿಸಿವೆ. ಈಗ ಜಾಗೃತ ಈಡಿಗ ಸಮಾಜವು ಇ ಪೊಳ್ಳು ಭರವಸೆ ಮತ್ತು ಉದಾಸೀನ ಮನೋಭಾವವನ್ನು ಸಹಿಸುವುದಿಲ್ಲ ಎಂದು ಜಂಟಿ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.