ಸಿಟಿಸ್ಕ್ಯಾನ್ ದರಕ್ಕೆ ಕಡಿವಾಣ: ಡಾ.ಸುಧಾಕರ್

ಕಲಬುರಗಿ ಮೇ 1: ಕೋವಿಡ್ ರೋಗಲಕ್ಷಣವಿದ್ದು ಆರ್‍ಟಿಪಿಸಿಆರ್ ನಲ್ಲಿ ನೆಗೆಟಿವ್ ಬರುವವರಿಗೆ ಸಿಟಿಸ್ಕ್ಯಾನ್ ಮಾಡಲು ಖಾಸಗಿ ಆಸ್ಪತ್ರೆಯವರು ದುಬಾರಿ ದರ ವಿಧಿಸುತ್ತಿದ್ದು ಇಂದು ಸಂಜೆಯೊಳಗೆ, ಸೂಕ್ತದರ ನಿಗದಿ ಪಡಿಸಲಾಗುವದು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದರು.
ನಗರಕ್ಕೆ ಆಗಮಿಸಿ ಜಿಮ್ಸ್, ಇಎಸ್‍ಐ ಆಸ್ಪತ್ರೆಗಳಿಗೆ ಭೇಟಿ ನೀಡುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿ,ದರ ನಿಗದಿಗೆ ತಜ್ಞರ ಸಮಿತಿ ನೇಮಿಸಿ ಸೂಕ್ತದರ ನಿಗದಿ ಮಾಡಲಾಗುವದು ಎಂದರು.
ರಾಜ್ಯದಲ್ಲಿ ರೆಮ್‍ಡಿಸಿವೆರ್ ಇಂಜಕ್ಷನ್ ಮತ್ತು ಆಕ್ಸಿಜನ್ ಕೊರತೆ ನಿಯಂತ್ರಣಕ್ಕೆ ಬಂದಿದ್ದು ಇನ್ನು ಮುಂದೆ ಇವುಗಳ ಕೊರತೆ ಆಗದು .ಇಂದು 18 ರಿಂದ 44 ವರ್ಷದವರಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗ ಬೇಕಿತ್ತು.ಇದಕ್ಕಾಗಿ 2 ಕೋಟಿ ಲಸಿಕೆ ಬೇಕಾಗುತ್ತದೆ,ಲಸಿಕೆಲಭ್ಯವಾದ ನಂತರ ಲಸಿಕಾಕರಣ ಆರಂಭಿಸಲಾಗುವದು.ಇಂದು ಬೆಂಗಳೂರಿನ ವಾಜಪೇಯಿ ಆಸ್ಪತ್ರೆಯಲ್ಲಿ 18-44 ವರ್ಷದವರ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಲಾಗುವದು ಎಂದರು.
ಕಫ್ರ್ಯೂ ವಿಸ್ತರಣೆ:
ಲಾಕ್ ಡೌನ್ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಕಫ್ರ್ಯೂ ವಿಸ್ತರಣೆ ಮೇ 12 ರ ನಂತರ ತೀರ್ಮಾನಿಸಲಾಗುವದು.ಯಾವ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಲ್ಲವೋ ಅಂತ ಕಡೆ ಸಮೀಪದ ಜಿಲ್ಲೆಯನ್ನು ಲಿಂಕ್ ಮಾಡಿ ಅಲ್ಲಿಯ ಜನರಿಗೆ ಚಿಕಿತ್ಸೆ ನೀಡಲಾಗುವದು ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ನಿರ್ದೇಶಕ ಡಾ.ಓಂಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ , ಜಿಮ್ಸ್ ನಿರ್ದೇಶಕಿ ಡಾ ಕವಿತಾಪಾಟೀಲ, ಸೇಡಂ ಶಾಸಕ,ಎನ್‍ಇಕೆಆರ್‍ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಸೇರಿದಂತೆ ಹಲವರಿದ್ದರು.