ಸಿಜೇಂಟ್  ಬ್ಯಾಡಗಿ ಮೆಣಸಿನಕಾಯಿ ಬೀಜವನ್ನು    ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲು ಆಗ್ರಹಿಸಿ ಪ್ರತಿಭಟನೆ.


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.15:  ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ಯಿಂದ  ಸಿಜೇಂಟ್ 20 43 (ಬ್ಯಾಡಗಿ) ಮೆಣಸಿನಕಾಯಿ  ಬೀಜವನ್ನು  ಕಡಿಮೆ ಬೆಲೆಗೆ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲೂ ವಿತರಿಸಲು ಆಗ್ರಹಿಸಿ ಇಂದು  ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ ಬಳ್ಳಾರಿ ತಾಲೂಕು ಸೇರಿದಂತೆ ಇಡೀ ಜಿಲ್ಲೆಯಾದ್ಯಂತ ಮೆಣಸಿನಕಾಯಿ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ, ಈ ಬೆಳೆ ಬೆಳೆಯುವುದಕ್ಕೆ  ಈ ಭಾಗದ ರೈತರು ಎರೆಡು, ಮೂರು ವರ್ಷಗಳಲ್ಲಿ ಸುಮಾರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಒಂದೊಮ್ಮೆ ಈ ಬೆಳೆಗೆ ರೋಗ ಬಂದು ಮತ್ತು ಮಳೆ ಬಂದು ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಾಶವಾಗಿ ಈ ಭಾಗದ ಒಬ್ಬೊಬ್ಬ ರೈತರು ಎರೆಡರಿಂದ ಮೂರು ಲಕ್ಷದಷ್ಟು ಸಾಲವನ್ನು ಮೈಮೇಲೆ ಹಾಕಿಕೊಳ್ಳಬೇಕಾಯಿತು.
ಇಷ್ಟಾದರೂ ಸಹ ರೈತರು ಕೃಷಿಯಿಂದ ಹಿಂದೆ ಸರಿಯದೆ,  ಹಲವಾರು ರೀತಿಯ ಬೆಳೆ ಬೆಳೆದು ತನ್ನ ಕುಟುಂಬವನ್ನು ನೋಡಿಕೊಳ್ಳುವುದರ ಜೊತೆಗೆ, ಇಡೀ ದೇಶಕ್ಕೆ ಅನ್ನ ಹಾಕುತ್ತಿದ್ದಾರೆ.
ಇಂದು ರೈತರು ಬೆಳೆ ಬೆಳೆಯಲು ಪ್ರಮುಖವಾದ ಅಂಶವೆಂದರೆ ಅದು ಬೀಜ, ಈ ಬೀಜ ಇಂದು ರೈತನಿಗೆ ಸರಿಯಾಗಿ ಕೈ ಸೇರುತ್ತಿಲ್ಲ, ಒಮ್ಮೆ ಬೀಜ ಸಿಕ್ಕರೂ ಸಹ ಅದರಲ್ಲಿ ಸಾಕಷ್ಟು ಪ್ರಮಾಣದ ಕಳಪೆ ಬೀಜ ಮಿಶ್ರಣವಾಗಿ ಸರಿಯಾದ ಇಳುವರಿ ಬರದಿರುವಂತ ಪರಿಸ್ಥಿತಿ ಉಂಟಾಗಿದೆ. ಇತ್ತೀಚೆಗೆ ಸಿಜೇಂಟ್ 20 43 (ಬ್ಯಾಡಗಿ) ಬೀಜಕ್ಕೆ ಸಾಕಷ್ಟು ಬೇಡಿಕೆ ಇದ್ದು, ಅದನ್ನು ಸರಿಯಾಗಿ ಮಾರುಕಟ್ಟೆಗೆ ತರದೆ, ಅಕ್ರಮವಾಗಿ ಮರಿಕೊಳ್ಳುತ್ತಿರುವುದರ ಬಗ್ಗೆ ಮತ್ತು ಈ ಬೀಜದ ಬೆಲೆ ದುಬಾರಿಯಾಗಿರುವುದರ ಬಗ್ಗೆ ರೈತರಲ್ಲಿ ತೀವ್ರವಾದ ಅಸಮಾಧಾನ ಏಳುತ್ತಿದೆ,  ಹಾಗಾಗಿ ಈ ಭಾಗದ ರೈತರ ಹಿತದೃಷ್ಟಿಯಿಂದ ಸಿಜೇಂಟ್ 20 43 ಮೆಣಸಿನಕಾಯಿ ಬೀಜವನ್ನು ಓಬಳಿ ಮಟ್ಟದಲ್ಲಾಗಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಾಗಲಿ, ಒಟ್ಟಾರೆ ಎಲ್ಲಾ ರೈತರಿಗೆ ಕೈಗೆಟಕುವ ಬೆಲೆಯಲ್ಲಿ ಬೀಜ ಸಿಗುವಂತೆ  ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಸಣ್ಣ, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ರೈತ ಮುಖಂಡರಾದ ಪಂಪಾಪತಿ, ಜಿಲ್ಲಾ ಸಮಿತಿ ಸದಸ್ಯರಾದ ನಿಂಗಪ್ಪ, ಬಸವರಾಜ್, ರೈತರಾದ ಹನುಮಂತ, ಮನೋಹರ ರೆಡ್ಡಿ, ಮಲ್ಲಪ್ಪ, ಹೊನ್ನೂರಪ್ಪ, ಹೇಮಣ್ಣ  ಸೇರಿದಂತೆ ಇತರರು ಇದ್ದರು.