ಸಿಜೆಗೆ ಸಿಡಿ ಯುವತಿ ಪತ್ರ ಪ್ರಕರಣಕ್ಕೆ ಹೊಸತಿರುವು

ಬೆಂಗಳೂರು,ಮಾ.೨೯- ರಾಸಲೀಲೆ ಸಿಡಿ ಪ್ರಕರಣವು ದಿನಕ್ಕೊಂದು ಅಯಾಮ ಪಡೆಯುತ್ತಿದ್ದು ಸಿಡಿ ಯುವತಿಯು ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಕೋರಿ ಯುವತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿರುವುದು ಇದೇ ಪ್ರಕರಣಕ್ಕೆ ಹೊಸತಿರುವು ಪಡೆದುಕೊಂಡಿದೆ.
ಇ-ಮೇಲ್ ಮೂಲಕವೇ ಮುಖ್ಯ ನ್ಯಾಯಮೂರ್ತಿ ಅವರಿಗೆ ನಿನ್ನೆ ಯುವತಿಯು ಬರೆದಿರುವ ಪತ್ರ ಕಳುಹಿಸಲಾಗಿದೆ ಎಂದು ಯುವತಿಯ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್ ಅವರು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿ. ಸಾರ್ವಜನಿಕವಾಗಿಯೇ ಜೀವ ಬೆದರಿಕೆ ಹಾಕಿದ್ದಾರೆ. ಪ್ರಕರಣದಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್‌ಐಟಿ ತನಿಖೆ ನಡೆಯಬೇಕು’ ಎಂದು ಪತ್ರದಲ್ಲಿ ಯುವತಿಯು ಮುಖ್ಯ ನ್ಯಾಯಮೂರ್ತಿ ಗಳನ್ನು ಕೋರಿದ್ದಾರೆ.
ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಾದರೂ ಆರೋಪಿ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ನನಗೆ ಅನ್ಯಾಯವಾಗುತ್ತಿದೆ. ನೀವೆ ನ್ಯಾಯ ಒದಗಿಸಬೇಕು’ ಎಂದೂ ಅವರು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ತಮ್ಮ ಮೇಲಿನ ಆರೋಪಗಳಿಂದ ಮುಕ್ತವಾಗಲು ಯಾವುದೇ ಸಂದರ್ಭದಲ್ಲಿ, ಯಾವುದೇ ಸ್ಥಳದಲ್ಲಿ ನನ್ನನ್ನು ಕೊಲ್ಲಬಹುದು ಎಂದು ಯುವತಿಯು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿ ದ್ದಾರೆ.
ಯುವತಿಯ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಪ್ರಕರಣದ ತನಿಖೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ನೇರ ಉಸ್ತುವಾರಿಯಲ್ಲಿ ನಡಯೆಬೇಕು ಮತ್ತು ರಾಜ್ಯ ಸರ್ಕಾರ ನನಗೆ ಸೂಕ್ತ ರಕ್ಷಣೆ ಒದಗಿಸಬೇಕು. ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ನಾನು ಅತ್ಯಾಚಾರದ ಸಂತ್ರಸ್ತೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಐಪಿಸಿ ೩೫೪, ೫೦೬, ೫೦೪, ೩೭೬ಸಿ, ೪೧೭ ಮತ್ತು ಐಟಿ ಕಾಯ್ದೆ ೬೭(ಎ) ಅಡಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ.
ರಮೇಶ್ ಜಾರಕಿಹೊಳಿ ಅವರು ಈಗಾಗಲೇ ಸಾರ್ವಜನಿಕವಾಗಿಯೇ ನನಗೆ ಬೆದರಿಕೆ ಹಾಕಿದ್ದಾರೆ. ಅವರ ಬೆಂಬಲಿಗರೂ ಕೂಡ ಪತ್ರಿಕಾ ಹೇಳಿಕೆ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಪೋಷಕರ ಮೇಲೆ ಭಾರೀ ಪ್ರಭಾವ ಬೀರಿರುವ ರಮೇಶ್ ಜಾರಕಿಹೊಳಿ, ಅವರನ್ನು ಒತ್ತಡದಲ್ಲಿರಿಸಿದ್ದಾರೆ ಎಂದು ಯುವತಿ ತಿಳಿಸಿದ್ದಾರೆ.
ನನ್ನ ಕುಟುಂಬಕ್ಕೆ ರಕ್ಷಣೆ:
ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ವಿಶೇಷ ತನಿಖಾ ದಳಕ್ಕೆ ಮನವಿ ಮಾಡಲಾಗಿತ್ತು. ಆದರೆ, ಅವರು ನಮಗೆ ರಕ್ಷಣೆ ಕೊಟ್ಟಿಲ್ಲ. ರಮೇಶ್ ಜಾರಕಿಹೊಳಿ ಅವರ ಜತೆ ಕೈ ಜೋಡಿಸಿರುವ ಎಸ್‌ಐಟಿ ನಿಸ್ಪಕ್ಷಪಾತವಾಗಿ ನಡೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.
ರಮೇಶ್ ಜಾರಕಿಹೊಳಿ ಅವರು ನಾನು ನ್ಯಾಯಾಧೀಶರ ಮುಂದೆ ಹಾಜರಾಗುವುದನ್ನು ತಡೆಯಲು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ನಾನು ಪ್ರಕರಣದಲ್ಲಿ ಹೇಳಿಕೆ ನೀಡುವುದನ್ನು ನಿಗ್ರಹಿಸಲಾಗುತ್ತಿದೆ ಎಂದು ಪತ್ರದಲ್ಲಿ ದೂರಿದ್ದಾರೆ.
ಕ್ರಿಮಿನಲ್ ಹಿನ್ನೆಲೆ:
ರಮೇಶ್ ಜಾರಕಿಹೊಳಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯಾಗಿದ್ದು, ಈಗಾಗಲೇ ಸಾಕ್ಷ್ಯಗಳನ್ನು ನಾಶ ಮಾಡಲು ಸಾಧ್ಯವಿರುವ ಎಲ್ಲ ದಾರಿಗಳನ್ನೂ ಬಳಕೆ ಮಾಡುತ್ತಿದ್ದಾರೆ. ಬಹಿರಂಗವಾಗಿಯೇ ನನಗೆ ಬೆದರಿಕೆ ಒಡ್ಡುತ್ತಿದ್ದಾರೆ. ನಾನು ತನಿಖಾಧಿಕಾರಿಗಳ ಮುಂದೆ ಹಾಜರಾಗದಂತೆ ತಡೆಯಲಾಗುತ್ತಿದೆ.
ಈ ಮೂಲಕ ಅವರ ಮೇಲಿರುವ ಆರೋಪದಿಂದ ಮುಕ್ತರಾಗುವ ಪ್ರಯತ್ನ ನಡೆಸುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ, ಯವುದೇ ಸ್ಥಳದಲ್ಲಿ ನನ್ನನ್ನು ಕೊಲ್ಲಬಹುದು, ಸಾಕ್ಷ್ಯ ನಾಶಪಡಿಸಬಹುದು. ರಾಜ್ಯ ಸರ್ಕಾರ ಕೂಡ ರಮೇಶ್ ಜಾರಕಿಹೊಳಿ ಅವರಿಗೇ ರಕ್ಷಣೆ ನೀಡುತ್ತಿದ್ದು, ಸರ್ಕಾರದ ಮೇಲಾಗಲಿ ಅಥವಾ ತನಿಖಾ ಸಂಸ್ಥೆ ಮೇಲಾಗಲಿ ನನಗೆ ನಂಬಿಕೆ ಉಳಿದಿಲ್ಲ. ಸರ್ಕಾರವೇ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸಲು ನನ್ನನ್ನು ಕೊಲ್ಲುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಸ್ವ ಇಚ್ಛೆಯಿಂದ ಹೋರಾಟ:
ನಾನು ಸ್ವ ಇಚ್ಛೆಯಿಂದ ನ್ಯಾಯಕ್ಕಾಗಿ ಪ್ರಭಾವಿ ವ್ಯಕ್ತಿಯ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ನನಗೆ ಸಾಕಷ್ಟು ಕಿರುಕುಳವಾಗಿದೆ. ಮಹಿಳೆಯ ಘನತೆ ರಕ್ಷಣೆಗಾಗಿ ನನ್ನ ಹೋರಾಟ ಮುಂದುವರಿದಿದೆ. ನನ್ನ ಪೋಷಕರು ಮಗಳು ಅಪಹರಣವಾಗಿದ್ದಾಳೆಂದು ನೀಡಿರುವ ಹೇಳಿಕೆ ಸಂಪೂರ್ಣ ಆಧಾರ ರಹಿತ ಎಂದು ಸ್ಪಷ್ಟಪಡಿಸಲಾಗಿದೆ.
ಡಿವೈಎಸ್‌ಪಿ ಕಟ್ಟಿಮನಿ ಅವರು ರಮೇಶ್ ಜಾರಕಿಹೊಳಿ ಅವರ ಪರವಾಗಿ ಕೆಲಸ ಮಾಡುತ್ತಿದ್ದು, ನನ್ನ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಘನ ನ್ಯಾಯಾಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದ್ದು, ನ್ಯಾಯಕ್ಕಾಗಿ ನ್ಯಾಯಾಲಯದ ಮುಂದೆ ಭಿಕ್ಷೆ ಬೇಡುತ್ತಿದ್ದೇನೆ ಎಂದು ಬರೆಯಲಾಗಿದೆ.
ಪತ್ರದಲ್ಲಿ ಮಾರ್ಚ್ ೨೮ ದಿನಾಂಕವನ್ನು ನಮೂದು ಮಾಡಲಾಗಿದೆ. ಜತೆಗೆ ಅರ್ಜೆಂಟ್ ಎಂಬ ಒಕ್ಕಣೆಯನ್ನೂ ಒಳಗೊಂಡಿದೆ.
ಜಡ್ಜ್ ಮುಂದೆ ಯುವತಿ:
ಸರಣಿ ವಿಡಿಯೋ ಹಾಗೂ ಆಡಿಯೋ ಹರಿಬಿಟ್ಟು ತನ್ನ ತಪ್ಪಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವ ಸಿಡಿ ಯುವತಿಯು ಇಂದು ಪ್ರತ್ಯಕ್ಷವಾಗುವ ಸಾಧ್ಯತೆಯಿದೆ.
ಇದಕ್ಕೆ ಪೂರಕವೆಂಬಂತೆ ಯುವತಿ ಪರ ವಕೀಲರು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರಾಗುತ್ತಾಳೆ ಎಂದು ತಿಳಿಸಿದ್ದಾರೆ. ಆದರೆ ನಾಳೆ ಸರ್ಕಾರಿ ರಜೆ ಇರುವುದರಿಂದ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ವಿರಳ. ಹೀಗಾಗಿ ಜಡ್ಜ್ ಮನೆ ಮುಂದೆ ಯುವತಿ ಹಾಜರಾಗಿ ಹೇಳಿಕೆ ನೀಡುವ ಸಾಧ್ಯತೆಯಿದೆ.