ಸಿಗರೇಟ್ ಬೀಡಿ ತುಂಡುಗಳ ವಿಲೇವಾರಿಗೆ ಹೊಸ ನಿಯಮ

ಬೆಂಗಳೂರು,ಮಾ.೮-ಸಿಗರೇಟ್ ಹಾಗೂ ಬೀಡಿ ತುಂಡುಗಳ ವಿಲೇವಾರಿ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೊಸ ಮಾರ್ಗಸೂಚಿ ಹೊರಡಿಸಿದೆ.
ಸಿಗರೇಟ್ ತುಂಡುಗಳ ವಿಲೇಗೆ ನಿಯಮ ರೂಪಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಕಳೆದ ನ.೧ರಂದು ಉನ್ನತ ಅಧಿಕಾರ ಸಮಿತಿಯನ್ನು ಕೆಎಸ್‌ಪಿಸಿಬಿ ರಚಿಸಿ ಪ್ರೊ. ಯು.ಎಸ್. ವಿಶಾಲ್ ರಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಸಮಿತಿ ಕೆಲ ನಿಯಮಗಳನ್ನು ರೂಪಿಸಿದೆ. ಸಿಗರೇಟ್ ತುಂಡುಗಳ ಕಸದ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಸಿಗರೇಟ್ ತಯಾರಕರು ಸಿಗರೇಟ್ ತುಂಡುಗಳ ಕಸದಿಂದ ಪರಿಸರ ಮತ್ತು ಆರೋಗ್ಯದ ಅಪಾಯ ಕುರಿತು ಮಾಹಿತಿ ನಮೂದಿಸಬೇಕು.
ಸಾರ್ವಜನಿಕ ಪ್ರದೇಶ, ಹೊರಾಂಗಣ, ಒಳಾಂಗಣ ಮತ್ತು ಕೆಲಸದ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಸಂಬಂಧಪಟ್ಟ ಅಧಿಕಾರಿಗಳು ದಂಡ ಹಾಕಲಿದ್ದು, ದಂಡ ವಿಧಿಸುವ ನಿಬಂಧನೆಯನ್ನು ಸ್ಥಳೀಯ ಅಧಿಕಾರಿಗಳು ತಮ್ಮ ಬೈಲಾಗಳಲ್ಲಿ ಸೇರಿಸಿಕೊಳ್ಳಬಹುದು. ಸಿಗರೇಟ್ ತುಂಡುಗಳ ಕಸ ಹಾಕುವುದನ್ನು ನಿಷೇಧಿಸಲಾಗಿದೆ.
ಮಕ್ಕಳಿಗೆ ಸಲಹೆ-ಸೂಚನೆ ಸಿಗರೇಟ್ ತುಂಡು ಕಸ ಹಾಕುವುದಕ್ಕೆ ದಂಡ ವಿಧಿಸಲು ನಿಯಮಗಳನ್ನು ಜಾರಿಗೊಳಿಸಲು ಸ್ಥಳೀಯ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಒಣ ತ್ಯಾಜ್ಯದೊಂದಿಗೆ ಸಿಗರೇಟ್ ತುಂಡು ಪ್ರತ್ಯೇಕಿಸಬೇಕು
ಸುರಕ್ಷಿತವಾಗಿ ಸಿಗರೇಟ್ ತುಂಡು ವಿಲೇವಾರಿ ಮಾಡುವ ಸೂಚನೆಗಳನ್ನು ಪ್ರತಿ ಸಿಗರೇಟ್ ಪ್ಯಾಕೆಟ್‌ನಲ್ಲಿ ತಯಾಕರು ಸ್ಪಷ್ಟವಾಗಿ ನಮೂದಿಸಬೇಕು ಎಂದು ಮಾರ್ಗಸೂಚಿಯಲ್ಲಿ ಕೆಎಸ್‌ಪಿಸಿಬಿ ಉಲ್ಲೇಖಿಸಿದೆ.