ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿ ಮಾಲೀಕನ ಮೇಲೆ ಹಲ್ಲೆ

ಬೆಂಗಳೂರು,ನ.5-ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿ ಮಾಲೀಕನ ಮೇಲೆ ಗನ್ ತೋರಿಸಿ ಡ್ರಾಗರ್‌ನಿಂದ ಹಲ್ಲೆ ಮಾಡಿರುವ‌ ಘಟನೆ ನೆಲಮಂಗಲದ ಅಡೇಪೇಟೆಯಲ್ಲಿ ನಡೆದಿದೆ.
ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸಿಗರೇಟ್ ಕೇಳುವ ನೆಪದಲ್ಲಿ ಅಡೇಪೇಟೆಯ
ಶ್ರೀ ವೀರೇಶ್ವರ ಪ್ರಾವಿಷನ್ ಸ್ಟೋರ್ ಮಾಲೀಕ ರುದ್ರೇಶ್ (42) ಮೇಲೆ ಹಲ್ಲೆ ಮಾಡಿದ್ದಾರೆ.
ದರೋಡೆಕೋರರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾಲೀಕನ ಕುತ್ತಿಗೆ ಭಾಗಕ್ಕೆ ಡ್ರಾಗರ್ ನಿಂದ ಇರಿದಿದ್ದಾರೆ. ಇರಿಯುತ್ತಿದ್ದಂತೆ ರುದ್ರೇಶ್ ಪ್ರತಿ ದಾಳಿ ನಡೆಸಲು ಮುಂದಾಗಿದ್ದು, ಹಲ್ಲೆಕೋರರ ಮುಖಕ್ಕೆ ಚೀಲ ಬಿಸಾಡಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಆರೋಪಿಗಳು ತಕ್ಷಣವೇ ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
ಗಾಯಗೊಂಡ ರುದ್ರೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಸಮೀಪವೇ ಘಟನೆ ನಡೆದಿದೆ.ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸಲಾಗಿದೆ.