
ಕಲಬುರಗಿ,ಮಾ.13-ಕಳೆದ ಕೆಲ ದಿನಗಳಿಂದ ಸಮೃದ್ಧಿ ಹಾಲು ಸಿಗದೆ ಗ್ರಾಹಕರು ಪರದಾಡುವಂತಾಗಿದೆ. ಜನರ ಬೇಡಿಕೆಗೆ ಅನುಗುಣವಾಗಿ ಹಾಲು ಪೂರೈಕೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ.
ನಗರದ ಬಹುತೇಕ ಕಡೆ ಹಾಲಿನ ಬೂತ್‍ಗಳಲ್ಲಿ ಕೆಲ ದಿನಗಳಿಂದ ಸಮೃದ್ಧಿ ಹಾಲು ದೊರೆಯುತ್ತಿಲ್ಲ. ಹೀಗಾಗಿ ಸಮೃದ್ಧಿ ಹಾಲು ಉತ್ಪಾದನೆ ಸ್ಥಗಿತಗೊಂಡಿದೆಯೇ? ಎಂಬ ಅನುಮಾನ ಜನರನ್ನು ಕಾಡುತ್ತಲಿದೆ.
ಈ ಬಗ್ಗೆ ಡೀಲರ್‍ಗಳು ಮತ್ತು ಹಾಲಿನ ಬೂತ್‍ನವರಿಗೆ ಕೇಳಿದರೆ ಸಮೃದ್ಧಿ ಹಾಲು ಉತ್ಪಾದನೆ ಸ್ಥಗಿತಗೊಂಡಿದಿಯೋ ಎನೋ ಗೊತ್ತಿಲ್ಲ. ಸರಬರಾಜು ಮಾತ್ರ ಆಗುತ್ತಿಲ್ಲ. ಹಾಲೇ ಸರಬರಾಜು ಆಗದಿದ್ದರೆ ನಾವೆಲ್ಲಿಂದ ತರೋಣ ಎನ್ನುತ್ತಿದ್ದಾರೆ.
ಗಟ್ಟಿಯಾದ ಹಾಗೂ ಕೆನೆಭರಿತ ಈ ಹಾಲು ಕನಿಷ್ಟ ಶೇ.6 ರಷ್ಟು ಜಿಡ್ಡಿನಾಂಶ ಹಾಗೂ ಶೇ.90 ರಷ್ಟು ಎಸ್‍ಎನ್‍ಎಫ್ ಹೊಂದಿದ್ದು, ಇದನ್ನು ಪಾಯಸ, ಸಿಹಿ ಉತ್ಪನ್ನಗಳು ಹಾಗೂ ಇತರೆ ಹಾಲಿನ ಉತ್ಪನ್ನಗಳನ್ನು ತಯಾರಿಸಲು ಬಳಸಬಹುದಾಗಿದೆ. ಕೆನೆಭರಿತ, ರುಚಿಕರ ಹಾಗೂ ಸ್ವಾದಿಷ್ಟವಾದ ಸಮೃದ್ಧಿ ಹಾಲಿನ ಬೇಡಿಕೆ ಹೆಚ್ಚಾಗಿದೆ. ಕೆಎಂಎಫ್ ಕಳೆದ ಫೆ.12 ರಿಂದ ನಂದಿನಿ ಸಮೃದ್ಧಿ ಹಾಲಿನ ದರ ಪರಿಷ್ಕರಣೆ ಮಾಡಿತ್ತು. ಅದರಂತೆ ಅರ್ಧ ಲೀಟರ್ ಹಾಲಿನ ದರ 24 ರೂ.ನಿಗದಿ ಪಡಿಸಿತ್ತು. ಆದರೂ ಈ ಹಾಲಿನ ಬೇಡಿಕೆ ಹೆಚ್ಚಾಗಿದೆ. ಆದರೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಮೃದ್ಧಿ ಹಾಲಿನ ಪೂರೈಕೆಯಾಗುತ್ತಿಲ್ಲ. ಇದರಿಂದ ಗ್ರಾಹಕರು ಸಮೃದ್ಧಿ ಹಾಲು ಸಿಗದೆ ಪರದಾಡುವಂತಾಗಿದೆ. ರಾಜ್ಯಾದ್ಯಂತ ಹಾಲು ಉತ್ಪಾದನೆ ಕುಂಠಿತವಾಗಿರುವುದು ಸಮೃದ್ಧಿಯ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಕೊರತೆ ಉಂಟಾಗಲು ಕಾರಣವೆನ್ನಲಾಗುತ್ತಿದೆ.
ನಂದಿನಿಯ ಉಳಿದ ಉತ್ಪನ್ನಗಳಾದ ಟೋನ್ಡ್ ಹಾಲು, ಹೊಮೊಜಿನೈಡ್ ಹಸುವಿನ ಹಾಲು ಮತ್ತು ಶುಭಂ ಹಾಲು ಪೂರೈಕೆಯಲ್ಲಿ ಕೊರತೆ ಉಂಟಾಗಿಲ್ಲ. ಕೇವಲ ಸಮೃದ್ಧಿ ಹಾಲಿನ ಕೊರತೆ ಉಂಟಾಗಿದ್ದು, ಉಳಿದ ಹಾಲಿನ ಬೇಡಿಕೆ ಮತ್ತು ಪೂರೈಕೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಹೈಫ್ಯಾಟ್ ಹಾಲಿನ ಉತ್ಪಾದನೆಯನ್ನು ಮಾತ್ರ ಸ್ಥಗಿತೊಳಿಸಿರುವುದಕ್ಕೆ ಕಾರಣವಿರಬಹುದು ಎನ್ನಲಾಗುತ್ತಿದೆ.
ಬಾಕ್ಸ್
ಸಮೃದ್ಧಿ ಹಾಲಿನ ಉತ್ಪಾದನೆ ಸ್ಥಗಿತಗೊಳಿಸಿಲ್ಲ
ನಂದಿನಿ ಸಮೃದ್ಧಿ ಹಾಲಿನ ಉತ್ಪಾದನೆ ಸ್ಥಗಿತಗೊಳಿಸಿಲ್ಲ ಎಂದು ಕಲಬುರಗಿ, ಬೀದರ್, ಯಾದಗಿರಿ ಹಾಲು ಒಕ್ಕೂಟ (ಕೆಎಂಎಫ್)ದ ಅಧ್ಯಕ್ಷ ಆರ್.ಕೆ.ಪಾಟೀಲ ಸ್ಪಷ್ಟಪಡಿಸಿದರು.
“ಸಂಜೆವಾಣಿ”ಯೊಂದಿಗೆ ಮಾತನಾಡಿದ ಅವರು, ನಂದಿನಿ ಸಮೃದ್ಧಿ ಹಾಲಿನ ಬೇಡಿಕೆ ಹೆಚ್ಚಾಗಿದೆ. ಜನರ ಬೇಡಿಕೆಗೆ ತಕ್ಕಂತೆ ಹಾಲು ಪೂರೈಕೆಗೆ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.
ಈ ವರ್ಷ ಹಾಲಿನ ಉತ್ಪಾದನೆ ಸ್ವಲ್ಪ ಕುಂಠಿತವಾಗಿದೆ. ಜೊತೆಗೆ ಬೇಡಿಕೆಯೂ ಹೆಚ್ಚಾಗಿದೆ. ಹೀಗಾಗಿ ಸಮೃದ್ಧಿ ಹಾಲು ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಿದೆಯೇ ಹೊರತು ಹಾಲು ಉತ್ಪಾದನೆಯನ್ನು ಸ್ಥಗಿತಗೊಳಿಸಿಲ್ಲ ಎಂದರು.
ಈ ಮೊದಲು ಪ್ರತಿದಿನ 40 ಸಾವಿರ ಲೀಟರ್ ಹಾಲು ಬೇಕಾಗುತ್ತಿತ್ತು. ಇದೀಗ 60 ಸಾವಿರ ಲೀಟರ್ ಹಾಲು ಬೇಕಾಗುತ್ತಿದೆ. ಅಂದರೆ, 20 ಸಾವಿರ ಲೀಟರ್ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಶಿವಮೊಗ್ಗ ಜಿಲ್ಲೆಯಿಂದ 20 ಸಾವಿರ ಲೀಟರ್ ಹಾಲು ತರಿಸಿ ಪೂರೈಕೆ ಮಾಡಲಾಗುತ್ತಿದೆ. ಈ ಬಾರಿ ಮಳೆ ಹೆಚ್ಚಾದುದ್ದು ಸಹ ಹಾಲು ಪೂರೈಕೆಯಲ್ಲಿ ಕೊರತೆಯುಂಟಾಗಲು ಕಾರಣವಾಗಿದೆ. ರೈತರಲ್ಲು ಸಹ ಹಾಲು ಉತ್ಪಾದನೆಯ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಜನರ ಬೇಡಿಕೆಗೆ ತಕ್ಕಂತೆ ಹಾಲು ಪೂರೈಕೆ ಮಾಡಲು ಸಮಸ್ಯೆಯುಂಟಾಗಿದೆ. ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗುವುದು. ಹಾಲು ಉತ್ಪಾದನೆ ಮತ್ತು ಅದರಿಂದ ಆಗುವ ಲಾಭಗಳ ಬಗ್ಗೆ ಮೂರು ಜಿಲ್ಲೆಗಳ ರೈತರಿಗೆ ತರಬೇತಿ ನೀಡಲಾಗುವುದು. ಆ ಮೂಲಕ ಹಾಲು ಉತ್ಪಾದನೆ ಮಾಡಲು ರೈತರಿಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.