ಸಿಗಂಧೂರು ದೇವಸ್ಥಾನ ಗೊಂದಲ ಪರಿಹಾರ : ಮುಖ್ಯಮಂತ್ರಿ ಭರವಸೆ


ಬೆಂಗಳೂರು, ನ. ೭- ಶಿವಮೊಗ್ಗ ಜಿಲ್ಲೆಯ ಸಿಗಂಧೂರು ದೇವಸ್ಥಾನವನ್ನು ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲೇ ಎಲ್ಲ ಗೊಂದಲಗಳನ್ನು ಪರಿಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸಿಗಂಧೂರು ಚೌಡೇಶ್ವರಿ ದೇವಾಲಯದ ಗೊಂದಲ ಸಂಬಂಧ ಈಡಿಗ ಸಮುದಾಯದ ರೇಣುಕಾನಂದ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು ೨೦ ವಿವಿಧ ಸಮುದಾಯಗಳ ಮಠಾಧೀಶರು ಹಾಗೂ ಶಾಸಕರ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ. ಇಲ್ಲಿ ಭಕ್ತರು ನೀಡುವ ಹಣಕಾಸು ವಿಚಾರದಲ್ಲಿ ಪಾರದರ್ಶಕತೆ ತರಬೇಕು ಎಂಬುದು ಭಕ್ತರ ಇಚ್ಛೆಯಾಗಿದೆ. ಹಾಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಲಹಾ ಸಮಿತಿ ರಚನೆ ಮಾಡಲಾಗಿದೆ ಎಂದರು.
ಈಗ ರಚಿಸಲಾಗಿರುವ ಸಮಿತಿಯಲ್ಲಿ ತಮ್ಮ ಮನವಿಯಂತೆ ಈಡಿಗ ಜನಾಂಗಕ್ಕೆ ಸೇರಿದ ಶ್ರೀ ರೇಣುಕಾನಂದ ಸ್ವಾಮೀಜಿಯವರನ್ನು ಸೇರ್ಪಡೆಗೊಳಿಸಲಾಗುವುದು. ಇವರು ಕೊಡುವ ಸಲಹೆ, ಮಾರ್ಗದರ್ಶನ ತೆಗೆದುಕೊಂಡು ಸಮಿತಿ ಕಾರ್ಯನಿರ್ವಹಿಸಲಿದೆ ಎಂದರು.
ಈಗ ರಚನೆಯಾಗಿರುವ ಸಮಿತಿ ಸದ್ಯ ೪ ತಿಂಗಳ ವರೆಗೂ ಮುಂದುವರೆಯಲಿದೆ. ಬಳಿಕ ಈ ಸಮಿತಿ ಇರಬೇಕೋ ಅಥವಾ ಇದನ್ನು ಕೈಬಿಡಬೇಕೋ ಎಂಬ ಬಗ್ಗೆ ಮುಂದೆ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದರು.
ಮನವಿ
ಇದಕ್ಕೂ ಮೊದಲು ಸ್ವಾಮೀಜಿಗಳ ಈ ನಿಯೋಗ ಸಿಗಂಧೂರು ಚೌಡೇಶ್ವರಿ ದೇವಾಲಯಕ್ಕೆ ಸಂಬಂಧಿಸಿದ ಗೊಂದಲಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಎಲ್ಲ ಗೊಂದಲಗಳನ್ನು ನಿವಾರಿಸಿ ಹಣಕಾಸಿನ ವಿಚಾರದಲ್ಲಿ ಪಾರದರ್ಶಕ ತರಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತ್ತು.
ಈ ನಿಯೋಗದಲ್ಲಿ ಶಾಸಕ ಹರತಾಳು ಹಾಲಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಂಜಾರ ಸಮಾಜದ ಸೇವಾಲಾಲ್ ಸ್ವಾಮೀಜಿ, ಭಗೀರಥ ಮಠದ ಪುರುಷೋತ್ತಮ ಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರಸ್ವಾಮೀಜಿ, ಹೊಸದುರ್ಗ ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ, ತಿಗಳ ಸಮುದಾಯದ ಲಕ್ಷ್ಮಿನರಸಿಂಹಸ್ವಾಮೀಜಿ, ಗಾಣಿಗ ಮಠದ ಬಸವಕುಮಾರಸ್ವಾಮೀಜಿ, ಮೇದಾರ ಪೀಠದ ಬಸವ ಛಲವಾದಿ ಸ್ವಾಮೀಜಿ ಮತ್ತಿತರರು ಇದ್ದರು.