ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ನೋಟೀಸ್!

ಶಿವಮೊಗ್ಗ, ಮಾ. ೨೬: ಪ್ರಸಿದ್ದ ಧಾರ್ಮಿಕ ಕ್ಷೇತ್ರ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಸಂಬಂಧ ಆಡಳಿತ ಮಂಡಳಿಗೆ ಧಾರ್ಮಿಕ ದತ್ತಿ ಇಲಾಖೆ ನೋಟೀಸ್ ಜಾರಿಗೊಳಿಸಿದೆ.
ದೇವಸ್ಥಾನ ನಿರ್ವಹಣೆ ಸಮರ್ಪಕವಾಗಿಲ್ಲ. ಹಣ ದುರುಪಯೋಗವಾಗಿದೆ ಎಂದು ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ, ದೇವಸ್ಥಾನವನ್ನು ಘೋಷಿತ ಸಂಸ್ಥೆ ಎಂದು ಘೋಷಿಸುವ ಸಲುವಾಗಿ ಆಕ್ಷೇಪಣೆಗಳಿದ್ದರೆ ತಿಳಿಸುವಂತೆ ಈ ಹಿಂದೆ ನೋಟೀಸ್ ನೀಡಲಾಗಿತ್ತು.
ಆದರೆ ಈ ನೋಟೀಸ್ ದೇವಾಲಯ ಆಡಳಿತ ಮಂಡಳಿಯು ಯಾವುದೇ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಧಾಮರ್?ಕ ದತ್ತಿ ಇಲಾಖೆಯು ಮತ್ತೊಮ್ಮೆ ನೋಟೀಸ್ ಜಾರಿಗೊಳಿಸಿದೆ.
ಬೆಂಗಳೂರಿನ ಧಾರ್ಮಿಕ ದತ್ತಿ ಆಯುಕ್ತರ ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ಏಪ್ರಿಲ್ ೮ ರಂದು ಘೋಷಿತ ಸಂಸ್ಥೆ ಎಂದು ನಿಗದಿಪಡಿಸುವ ಕುರಿತು ಸಭೆ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.