ಸಿಐಡಿ ಅಧಿಕಾರಿಗಳ ತಳ್ಳಿ ಓಡಿ ಹೋದ ಆರ್.ಡಿ.ಪಾಟೀಲ

ಕಲಬುರಗಿ,ಜ.19-ಪಿಎಸ್‍ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಮತ್ತೆ ಪರಾರಿಯಾಗಿದ್ದಾರೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮತ್ತು ಸಿಐಡಿ ಅಧಿಕಾರಿಗಳ ನೋಟಿಸ್‍ಗೆ ಕ್ಯಾರೆ ಅನ್ನದೇ ಇರುವ ಹಿನ್ನೆಲೆಯಲ್ಲಿ ಗುರುವಾರ ಸಿಐಡಿ ಅಧಿಕಾರಿಗಳು ಆರ್.ಡಿ.ಪಾಟೀಲ ಅವರನ್ನು ಬಂಧಿಸಿ ವಿಚಾರಣೆ ನಡೆಸಲು ಕರೆದೊಯ್ಯುತ್ತಿದ್ದರು. ಈ ವೇಳೆ ಆರ್.ಡಿ.ಪಾಟೀಲ ಸಿಐಡಿ ಅಧಿಕಾರಿಗಳನ್ನು ತಳ್ಳಿ ಓಡಿ ಹೋಗಿದ್ದು,ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್‍ಐ ನೇಮಕಾತಿ ಹಗರಣದ ಪ್ರಮುಖ ಆರೋಪಿಯಾದ ಆರ್.ಡಿ.ಪಾಟೀಲಗೆ ನ್ಯಾಯಾಲಯ ಇತ್ತೀಚೆಗಷ್ಟೇ ಷರತ್ತು ಬದ್ಧ ಜಾಮೀನು ನೀಡಿತ್ತು. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಆರ್.ಡಿ.ಪಾಟೀಲ ಓಡಾಟ ನಡೆಸಿದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಸಿಐಡಿ ಅಧಿಕಾರಿಳು ಜಾರಿ ಮಾಡಿದ್ದ ನೋಟಿಸ್‍ಗೂ ಕ್ಯಾರೆ ಎನ್ನದೆ ಆರ್.ಡಿ.ಪಾಟೀಲ ಓಡಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಗುರುವಾರ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದರು.
ಬಂಧಿಸಿ ವಿಚಾರಣೆಗೆಂದು ಕರೆದೊಯ್ಯುತ್ತಿದ್ದ ವೇಳೆ ಆರ್.ಡಿ.ಪಾಟೀಲ ಸಿಐಡಿ ಅಧಿಕಾರಿಗಳನ್ನು ತಳ್ಳಿ ಓಡಿ ಹೋಗಿದ್ದು, ಪರಾರಿಯಾಗಿರುವ ಆರ್.ಡಿ.ಪಾಟೀಲ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಇದಲ್ಲದೆ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಆರ್.ಡಿ.ಪಾಟೀಲ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಗುರುವಾರ ದಾಳಿ ಮಾಡಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಅಧಿಕಾರಿಗಳು ನೆರೆಯ ತೆಲಂಗಾಣ ರಾಜ್ಯದ ನಾಮಫಲಕ ಹೊಂದಿದ ವಾಹನಗಳಲ್ಲಿ ಬಂದಿದ್ದರು. ಪಿಎಸ್‍ಐ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಭ್ಯರ್ಥಿಗಳಿಂದ ಪಡೆದ ಹಣದ ದಾಖಲೆಗಳು, ಇತರೆ ಮಾಹಿತಿ ಕಲೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.