
ಕೋಲ್ಕತ್ತಾ(ಪಶ್ಚಿಮಬಂಗಾಳ),ಜು.೨೩-ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಸಿಐಎಸ್ಎಫ್ ಅಧಿಕಾರಿಯೊಬ್ಬರು ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಧಿಕಾರಿಯನ್ನು ಸಿಐಎಸ್ಎಫ್ ಸಬ್ಇನ್ಸ್ಸ್ಪೆಕ್ಟರ್ ಪಂಕಜ್ಕುಮಾರ್ ಎಂದು ಗುರುತಿಸಲಾಗಿದೆ.
ವಿಮಾನ ನಿಲ್ದಾಣದ ಸಿಬ್ಬಂದಿಗೆಂದೇ ನಿನ್ನೆ ರಾತ್ರಿ ೭.೪೫ರ ಸುಮಾರಿನಲ್ಲಿ ಮೀಸಲಾದ ನೆಲಮಾಳಿಗೆಯ ಶೌಚಾಲಯದಲ್ಲಿ ಅಧಿಕಾರಿಯ ಶವ ರಕ್ತದಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ಪಂಕಜ್ಕುಮಾರ್ ಶೌಚಾಲಯಕ್ಕೆ ತೆರಳಿದಾಗ ಗುಂಡುಹಾರಿಸಿಕೊಂಡಿದ್ದಾರೆ.
ಗುಂಡಿನ ಸದ್ದು ಕೇಳಿದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಶೌಚಾಲಯಕ್ಕೆ ಧಾವಿಸಿ ನೋಡಿದಾಗ ಅಧಿಕಾರಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಹಣೆಯ ಮೇಲೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ವೀಸ್ ಪಿಸ್ತೂಲ್ ಶವದ ಪಕ್ಕದಲ್ಲಿ ಬಿದ್ದಿರುವುದು ಕಂಡುಬಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತ ಪಂಕಜ್ಕುಮಾರ್ರವರ ಬಗ್ಗೆ ಸಹೋದ್ಯೋಗಿಗಳು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.