ಸಿಎ ಪಾಸ್ ಮಾಡಿದ ದಿನಪತ್ರಿಕೆ ಹಂಚುವ ಹುಡುಗ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು 9: ದಿನ ಪತ್ರಿಕೆ ಹಂಚುವ ಹುಡುಗ ಸಿಎ ಪಾಸ್ ಮಾಡಿದ್ದು, ನಗರದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಸ್ಥಳೀಯ ಶಾರದಾ ಬುಕ್ ಸ್ಟಾಲ್‌ನ ವೆಂಕಟೇಶ್À ಕುಡತಿನ ಹಾಗೂ ಹನುಮಂತಪ್ಪ ಕುಡತಿನಿ ಅವರ ಮೊಮ್ಮಗ, ಮಹೇಶ್ ಕುಡತಿನಿ ಅವರ ಪುತ್ರ ಕೆ.ವಾಗೀಶ್ ಸಿಎ ಪರೀಕ್ಷೆ ಪಾಸ್ ಮಾಡಿದ್ದಾರೆ. ಮೂಲತಃ ಕುಡತಿನಿಯವರಾದ ಇವರು ಕಳೆದ ಐದು ದಶಕಗಳಿಂದ ನಾಡಿನ ವಿವಿಧ ದಿನಪತ್ರಿಕೆಗಳ ವಿತರಕರಾಗಿದ್ದು, ನಗರದಲ್ಲಿಂದು ವಿಶಿಷ್ಠ ಬುಕ್ ಸ್ಟಾಲ್ ನಿರ್ಮಾಣ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಕುಡತಿನಿ ಕುಟುಂಬದ ವಾಗೀಶ್ ಕುಟುಂಬದ ವೃತ್ತಿಯಲ್ಲಿ ಭಾಗಿಯಾಗಿ ಪೇಪರ್ ಹಾಕುವ ಕೆಲಸದೊಂದಿಗೆ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವ್ಯಾಸಂಗ ಮುಗಿಸಿದ್ದಾರೆ.
ಸ್ಥಳೀಯ ಮಹಿಳಾ ಸಮಾಜ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದು, ನಗರದ ಹೊರವಲಯದ ನ್ಯಾಷನಲ್ ಕಾಲೇಜಿನಲ್ಲಿ ಪಿಯು ಅಭ್ಯಾಸಿಸಿದ್ದಾರೆ. ಇಲ್ಲಿನ ವಿಷನ್ ಫ್ರೋಫೆಷನಲ್ ಅಕಾಡೆಮಿ ವಾಗೀಶ್‌ಗೆ ಸಿಎ ಕೋರ್ಸ್ ನ ಅಡಿಪಾಯ ಹಾಕಿ ಕೊಟ್ಟಿದ್ದು, ಈ ಕೋಚಿಂಗ್ ಅಕಾಡೆಮಿಯ ಟಾಕೂರ್ ಜಿನ್ಯಾನಿಯವರು ನೀಡಿದ ಶಿಕ್ಷಣ, ಪ್ರೋತ್ಸಾಹ ಕ್ಷಣವೂ ನೆನೆಯುವಂಥದ್ದು, ಎನ್ನುತ್ತಾರೆ ವಾಗೀಶ್.
ತಂದೆ ಮಹೇಶ್ ಹಾಗೂ ಚಿಕ್ಕಪ್ಪ ಜಗದೀಶ್ ಅವರ ಉತ್ಸಾಹದ ಮಾತುಗಳು, ಮನೆಯ ಎಲ್ಲ ಹಿರಿಯರ ಪ್ರೋತ್ಸಾಹ ನನ್ನ ಯಶಸ್ಸಿಗೆ ಕಾರಣವಾಗಿದೆ. ನಮ್ಮದು ಅವಿಭಕ್ತ ತುಂಬು ಕುಟುಂಬ. ಈ ಯಶಸ್ಸು ಎಲ್ಲರ ಖುಷಿಗೆ ಕಾರಣ ಎಂಬುದು ವಾಗೀಶ್ ನುಡಿ.
ಪ್ರಯತ್ನಿಸಿದರೆ ಎಲ್ಲ ಸರಳ
ಸಿಎ ತುಂಬ ಕಠಿಣ ಹಾಗೂ ಕಷ್ಟ ಸಾಧ್ಯ ಎಂಬ ಮಾತು ಅನೇಕರಿಂದ ಕೇಳಿ ಪಟ್ಟಿದ್ದೆ. ಆದರೆ, ತಂದೆ ಹಾಗೂ ಕುಟುಂಬದ ಹಲವು ಬಗೆಯ ಕಷ್ಟಗಳನ್ನು ಕಂಡಾಗ ಸಿಎ ಮಾಡುವ ಹಠಕ್ಕೆ ಬಿದ್ದೆ. ಬದ್ಧತೆಯಿಂದ ನಿರಂತರ ಓದಿದೆ. ಮೊದಲ ಬಾರಿಯ ಪರೀಕ್ಷೆಯಲ್ಲಿ ಯಶಸ್ಸು ಕಾಣಲಿಲ್ಲ. ಹಾಗಂತ ಕುಗ್ಗದೆ ಮತ್ತೆ ಓದಿಗೆ ಕುಳಿತೆ. ದಿನದ ೧೫ ಗಂಟೆ ಅಭ್ಯಾಸಿಸಿದೆ. ಬಾಲ್ಯದ ಗೆಳೆಯ ಪ್ರವೀಣ್ ಜಿ. ಕೂಡ ಸಿಎ ಕೋರ್ಸ್ಗೆ ಜತೆಯಾಗಿ ನನ್ನೊಂದಿಗೆ ಆತನು ಉತ್ತೀರ್ಣನಾದ. ಇದು ನನಗೆ ಡಬಲ್ ಖುಷಿ ತಂದಿದೆ. ಪ್ರಯತ್ನಿಸಿದರೆ ಯಾವುದೂ ಅಸಾಧ್ಯವಲ್ಲ. ಸಾಧಿಸುವ ಛಲ ಇರಬೇಕು ಅಷ್ಟೇ.
ವಾಗೀಶ್ ಕುಡತಿನಿ.
 ಸಿಎ ಪಾಸ್ ಆದ ಗೆಳೆಯ ಪ್ರವೀಣ್ ಜಿ.
ಹೊಸಪೇಟೆ: ನಗರದ ಚಪ್ಪರದಳ್ಳಿಯ ಜಿ.ಜಂಬಯ್ಯರ ಪುತ್ರ ಜಿ.ಪ್ರವೀಣ್ ಸಿಎ ಪಾಸ್ ಮಾಡಿದ್ದು, ಮನೆ ಹಾಗೂ ಬಂಧುಗಳಲ್ಲಿ ಸಂತಸ ನರ್ಮೇಡಿಸಿದೆ. ಜಿ.ಪ್ರವೀಣ್ ಕೂಡ ಸ್ಥಳೀಯ ಮಹಿಳಾ ಸಮಾಜ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ ನಂತರ ಇಲ್ಲಿನ ನ್ಯಾಷನಲ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡಿದ್ದಾರೆ. ಅಲ್ಲದೇ, ಇಲ್ಲಿನ ವಿಷನ್ ಫ್ರೋಫೆಷನಲ್ ಅಕಾಡೆಮಿಯಲ್ಲಿ ಸಿಎ ಕೋರ್ಸ್ ಕೋಚಿಂಗ್ ಪಡೆದಿದ್ದಾರೆ. ಮನೆಯವರ ಎಲ್ಲ ರೀತಿಯ ಸಹಕಾರ ನನ್ನ ಸಾಧನೆಗೆ ಪೂರಕವಾಗಿದೆ ಎನ್ನುವ ಜಿ.ಪ್ರವೀಣ್, ನಿರಂತರ ಅಭ್ಯಾಸ ಅಗತ್ಯ ಎನ್ನುತ್ತಾರೆ. ಪ್ರವೀಣ್ ಹಾಗೂ ಕೆ.ವಾಗೀಶ್ ಬಾಲ್ಯದಿಂದಲೂ ಒಟ್ಟಿಗೆ ಆಡಿ ಬೆಳೆದ ಗೆಳೆಯರಾಗಿದ್ದು, ಇಬ್ಬರ ಕನಸು ನನಸಾಗಿದೆ.