ಸಿಎಸ್‍ಪುರದಲ್ಲಿ ಗ್ರಾ.ಪಂ. ಸದಸ್ಯತ್ವ ಹರಾಜು ಆರು ಜನರ ವಿರುದ್ದ ಕೇಸು ದಾಖಲು

ಬಳ್ಳಾರಿ ಡಿ 20 : ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ರಾಮದುರ್ಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದ್ರಶೇಖರಪುರ( ಸಿಎಸ್ ಪುರ)ದಲ್ಲಿ ಹರಾಜು ಕೂಗುವ ಮೂಲಕ ಆರು ಜನ ಗ್ರಾಮ ಪಂಚಾಯಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲು ಮುಂದಾಗಿದ್ದು. ಆರು ಜನರ ವಿರುದ್ದ ಗುಡೇಕೋಟೆ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲಾಗಿದೆ.
ಚಂದ್ರಶೇಖರಪುರ ಗ್ರಾಮದ 2 ಮತ್ತು 4ನೇ ಕ್ಷೇತ್ರಗಳಿಗೆ ಆರು ಜನ ಸದಸ್ಯರನ್ನು ಆಯ್ಕೆ ಮಾಡಬೇಕಾಗಿತ್ತು. ಶನಿವಾರ ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, ಮುನ್ನಾದಿನವಾದ ಶುಕ್ರವಾರ ಸಂಜೆ ಗ್ರಾಮದ ಸಮೀಪ ಇರುವ ದೇವಸ್ಥಾನವೊಂದರಲ್ಲಿ ಹರಾಜು ನಡೆದಿತ್ತು. ಗ್ರಾಮದ ಮುಖಂಡರು ಸೇರಿ ದೇವಸ್ಥಾನದ ಹೆಸರಿನಲ್ಲಿ ಹರಾಜು ಹಾಕುವ ಪ್ರಕ್ರಿಯೆ ನಡೆಸಲಾಗಿತ್ತು ಈ ವಿಡಿಯೊ ವೈರಲ್ ಆಗಿತ್ತು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಹಶೀಲ್ದಾರ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ, ಕೂಡ್ಲಿಗಿ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ನಿನ್ನೆ ಪರಿಶೀಲಿಸಿದರು. ಮುಖಂಡರಾದ ಗೌಡ್ರ ಶರಣಪ್ಪ, ಹುಲಿಕುಂಟೆಪ್ಪ, ನಿಂಗಪ್ಪ, ಮಲಿಜಾತಪ್ಪ, ಅಂಜನಿ, ಬಸವರಾಜ, ಪ್ರಸನ್ನಕುಮಾರ, ಪಾಪಣ್ಣ, ಸಾರಪ್ಪ, ಪತ್ರೆಪ್ಪ ಅವರ ವಿರುದ್ಧ ರಾಮದುರ್ಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.