ಸಿಎಸ್‌ಕೆ – ಆರ್‌ಸಿಬಿ ಹಣಾಹಣಿ ಸನ್‌ರೈಸರ್‍ಸ್-ಡೆಲ್ಲಿ ಮುಖಾಮುಖಿ


ಮುಂಬೈ,ಏ.೨೫- ಐಪಿಎಲ್ ಕ್ರಿಕೆಟ್‌ನಲ್ಲಿಂದು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಗೆಲ್ಲುವ ಹುಮ್ಮಸ್ಸಿನಲ್ಲಿವೆ. ಟೂರ್ನಿಯಲ್ಲಿ ಕೊಹ್ಲಿ ನೇತೃತ್ವಸ ಆರ್‌ಸಿಬಿ ಸತತ ೪ ಪಂದ್ಯಗಳನ್ನು ಗೆದ್ದು, ಇಂದಿನ ಪಂದ್ಯದಲ್ಲೂ ವಿಜಯದ ನಾಗಾಲೋಟವನ್ನು ಮುಂದುವರೆಸಲು ಟೊಂಕಕಟ್ಟಿ ನಿಂತಿದೆ.
ಪ್ರಸ್ತುತ ಟೂರ್ನಿಯಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರ್‌ಸಿಬಿ ಪರ ದೇವದತ್ತ ಪಡಿಕಲ್, ನಾಯಕ ಕೊಹ್ಲಿ, ಎಬಿ ಡಿವಿಲಿಯರ್‍ಸ್, ಮ್ಯಾಕ್ಸ್‌ವೆಲ್, ಬ್ಯಾಟಿಂಗ್ ಲಯ ಕಂಡುಕೊಂಡಿದ್ದು, ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ. ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಹರ್ಷಲ್, ಜೆಮಿಸನ್, ಸಿರಾಜ್, ಚಹಲ್, ವಾಷಿಂಗ್ಟನ್ ಸುಂದರ್, ಉತ್ತಮ ಬೌಲಿಂಗ್ ಪ್ರದರ್ಶಿಸುವ ವಿಶ್ವಾಸದಲ್ಲಿದ್ದಾರೆ.
ಮತೊಂದೆಡೆ ಧೋನಿ ನೇತೃತ್ವದ ಸಿಎಸ್‌ಕೆ ೪ ಪಂದ್ಯಗಳಲ್ಲಿ ಒಂದು ಪಂದ್ಯ ಸೋತು ೩ರಲ್ಲಿ ಗೆಲುವು ಸಾಧಿಸಿದೆ. ತಂಡದಲ್ಲಿ ಋತುರಾಜ್, ಡೂಪ್ಲೆಸಿ, ಮೋಯಿನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಧೋನಿ, ಜಡೇಜಾರಂತಹ ಉತ್ತಮ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಲು ಸಜ್ಜಾಗಿದ್ದಾರೆ.
ಎರಡೂ ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದ್ದು, ಗೆಲುವಿನ ಮಾಲೆ ಯಾರಿಗೆ ಎಂಬುದು ಕುತೂಹಲ ಕೆರಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ತಂಡ ೨೦೦ರ ಸಮೀಪಕ್ಕೆ ಮೊತ್ತವನ್ನು ಕಲೆ ಹಾಕಬಹುದಾಗಿದೆ. ಮೈದಾನದಲ್ಲಿ ಇಬ್ಬನಿ ಇರುವುದರಿಂದ ೨ನೇ ಬಾರಿ ಫೀಲ್ಡಿಂಗ್ ಮಾಡುವುದು ತುಸು ಕಷ್ಟವಾಗಲಿದೆ.
ಇದೇ ವೇಳೆ ಚೆನ್ನೈನಲ್ಲಿ ಸನ್ ರೈಸರ್‍ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ ನಡುವೆ ಮತ್ತೊಂದು ಪಂದ್ಯ ನಡೆಯಲಿದೆ. ಎರಡೂ ಪಂದ್ಯ ಗೆದ್ದಿರುವ ರಿಷಬ್‌ಪಂತ್ ಪಡೆ ೩ನೇ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ.
ಸನ್‌ರೈಸರ್‍ಸ್ ಹೈದರಾಬಾದ್ ೪ ಪಂದ್ಯಗಳ ಪೈಕಿ ಕೇವಲ ೧ ಪಂದ್ಯ ಮಾತ್ರ ಗೆದ್ದಿದೆ. ಇಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಉಭಯ ತಂಡಗಳ ನಡುವೆ ಗೆಲುವಿಗಾಗಿ ಹಣಾಹಣಿ ಏರ್ಪಡಲಿದೆ.