ಸಿಎಸ್‌ಆರ್ ಸೌಲಭ್ಯ ಪೋರ್ಟಲ್ ಗೆ ಸಿಎಂ ಚಾಲನೆ

ಬೆಂಗಳೂರು,ಮೇ ೨೬- ಸಿಎಸ್‌ಆರ್ ಸೌಲಭ್ಯದ ಸಮಗ್ರ ಆನ್‌ಲೈನ್ ವೇದಿಕೆ ಆಕಾಂಕ್ಷ ಪೋರ್ಟಲ್‌ಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಚಾಲನೆ ನೀಡಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಕಾಂಕ್ಷ ಪೋರ್ಟಲ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ ಕಾರ್ಪರೇಟ್ ಸಾಮಾಜಿಕ ಯೋಜನೆ ಜವಾಬ್ದಾರಿ ಯೋಜನೆಗಳನ್ನು ಸುಗಮವಾಗಿ ಪಾರದರ್ಶಕವಾಗಿ ನಿರ್ವಹಿಸಲು ಈ ಪೋರ್ಟಲ್‌ನಿಂದ ಅನುಕೂಲವಾಗಲಿದೆ ಎಂದರು.
ಕೋವಿಡ್ ನಿಯಂತ್ರಣ ಪ್ರಕ್ರಿಯೆಯಲ್ಲಿ ಕಾರ್ಪರೇಟ್ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರ ಸಹಾಯವನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು ಸಿಎಸ್‌ಆರ್ ನಿಧಿಯಿಂದ ಆರೋಗ್ಯ ವಲಯಕ್ಕೆ ೧೭೫ ಕೋಟಿ ರೂ. ಸಂಗ್ರಹವಾಗಿದೆ ಎಂದರು.
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುಎನ್‌ಡಿಪಿಯು ಈ ಪೋರ್ಟಲ್ ರಚನೆಯಲ್ಲಿ ನೆರವು ನೀಡಿದೆ. ಪಾರದರ್ಶಕವಾಗಿ ಸಿಎಸ್‌ಆರ್ ಅನುದಾನ ಬಳಕೆಗೆ ಇದರಿಂದ ಅನುವಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಈ ಪೋರ್ಟಲ್ ಸಿದ್ಧಪಡಿಸಲಾಗಿದೆ. ಇದು ಕೋವಿಡ್ ನಿರ್ವಹಣೆ ಹಾಗೂ ವಿಶ್ವಸಂಸ್ತೆಯ ಸುಸ್ಥಿರ ಅಭಿವೃದ್ದಿ ಹಾಗೂ ಗುರಿಗಳ ಸಾಧನೆಗೆ ಪೂರಕವಾಗಿದೆ ಎಂದರು.
ವಿಶ್ವಸಂಸ್ಥೆ ನಿಗದಿಪಡಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಮಿಷನ್ ೨೦೩೦ ರೂಪಿಸಲಾಗಿದೆ. ಇದಕ್ಕೆ ಬೇಡಿಕೆ ಇರುವ ೭೫ ಸಾವಿರ ಕೋಟಿ ರೂ. ಅನುದಾನದ ಪೈಕಿ ೬೧ ಸಾವಿರ ಕೋಟಿ ರೂ. ಅಯವ್ಯಯದಲ್ಲಿ ಒದಗಿಸಲಾಗಿದೆ ಎಂದರು.
ಕೊರೊನಾ ನಿರ್ಬಂಧಗಳಿಂದ ರಾಜ್ಯದ ಆರ್ಥಿಕ ಸ್ಥಿತಿಗೆ ತೊಂದರೆಯಾಗಿದ್ದರೂ ಬಾಧಿತರಿಗೆ ೧೨೫೦ ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿದೆ. ಅಲ್ಲದೆ ೨.೦೬ ಲಕ್ಷ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ೯೫೬ ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಚಿವ ನಾರಾಯಣ ಗೌಡ, ಯೋಜನೆ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನಶ್, ನೋಡೆಲ್ ಅಧಿಕಾರಿ ಉಮಾಮಹಾದೇವನ್ ಮತ್ತಿತರರು ಇದ್ದರು.